ಜಮ್ಮು ಬಸ್ಸು ನಿಲ್ದಾಣದಲ್ಲಿ ಬಾಂಬ್ ಪತ್ತೆ!! ತಪ್ಪಿದ ಭಾರೀ ಅನಾಹುತ.



ಜಮ್ಮು: ಇತ್ತೀಚೆಗಷ್ಟೇ ಲೋಕಾರ್ಪಣೆಯಾದ ಜಮ್ಮು ಬಸ್ ನಿಲ್ದಾಣದಲ್ಲಿ ಭಾನುವಾರ ಬರೊಬ್ಬರಿ ಏಳು ಕೆಜಿ ತೂಕದ ಐಇಡಿ ಸ್ಫೋಟಕ ಪತ್ತೆಯಾಗಿದೆ.

ಜಮ್ಮು ನಗರದ ಅತ್ಯಂತ ಜನಸಂದಣೆ ಇರುವ ಬಸ್‌ ನಿಲ್ದಾಣ ಪ್ರದೇಶದಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮುಐಜಿ ಮುಖೇಶ್ ಸಿಂಗ್ ಅವರು, ‘ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳು ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ. ಈ ಬಗ್ಗೆ ನಮಗೆ ಮೊದಲೇ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದೆವು.

ಇದೇ ನಿಟ್ಟಿನಲ್ಲಿ ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಾವು ಸೊಹೈಲ್ ಎಂಬ ವ್ಯಕ್ತಿಯನ್ನು ಬಂಧಿಸಿ ಸುಮಾರು 6ರಿಂದ 6.5 ಕೆಜಿ ಐಇಡಿ ವಶಪಡಿಸಿಕೊಂಡಿದ್ದೇವೆ. ಅಲ್ಲದೆ ಕಳೆದ ರಾತ್ರಿ ನಾವು ಸಾಂಬಾದಿಂದ 15 ಸಣ್ಣ ಐಇಡಿ ಸ್ಪೋಟಕಗಳು ಮತ್ತು 6 ಪಿಸ್ತೂಲ್‌ಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ಚಂಡೀಗಢ ದ ಖಾಜಿ ವಸೀಮ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನೊಂದಿಗೆ ಅಬಿದ್ ನಬಿ ಎಂಬ ವ್ಯಕ್ತಿಯನ್ನೂ ನಾವು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆ ಪ್ರಯುಕ್ತದ ದಾಳಿ ಸಂಚು ವಿಫಲ
2019ರ ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯ ಪ್ರಯುಕ್ತ ಮತ್ತೊಂದು ಸ್ಫೋಟ ನಡೆಸುವ ಉಗ್ರರ ಯೋಜನೆಯು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಕುಂಜ್ವಾನಿ ಮತ್ತು ಸಾಂಬಾ ಜಿಲ್ಲೆಯ ಬಡೀ ಬ್ರಾಹ್ಮಣ ಪ್ರದೇಶದಿಂದ ಇಬ್ಬರು ಪ್ರಮುಖ ಉಗ್ರರನ್ನು ಬಂಧಿಸಿರುವ ಬೆನ್ನಲ್ಲೇ ಐಇಡಿ ಪತ್ತೆ ಮಾಡಲಾಗಿದೆ. ನಿರ್ಧಿಷ್ಟ ಮಾಹಿತಿಯನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಒಬ್ಬ ಪೊಲೀಸ್ ಹತ್ಯೆಗೆ ಸಂಬಂಧಿಸಿದಂತೆ ಉಗ್ರ ಝಹೂರ್‌ ಅಹ್ಮದ್‌ ರಾಥರ್‌ಗಾಗಿ ಹುಡುಕಾಟ ನಡೆದಿತ್ತು. ಶನಿವಾರ ಸಾಂಬಾದ ಬಡೀ ಬ್ರಾಹ್ಮಣ ಪ್ರದೇಶದಲ್ಲಿ ದಿ ರೆಸಿಸ್ಟೆನ್ಸ್‌ ಫ್ರಂಟ್‌ನೊಂದಿಗೆ (ಟಿಆರ್‌ಎಫ್‌) ಗುರುತಿಸಿಕೊಂಡಿರುವ ಉಗ್ರ ಝಹೂರ್‌ನನ್ನು ಬಂಧಿಸಲಾಯಿತು.

ಲಷ್ಕರ್–ಎ–ಮುಸ್ತಫಾ (ಎಲ್ಇಎಂ) ಸಂಘಟನೆಯ ಕಮಾಂಡರ್‌ ಎಂದು ಕರೆದುಕೊಂಡಿರುವ ಹಿಂದಾಯತುಲ್ಲಾಹ್‌ ಮಲ್ಲಿಕ್‌ ಅಲಿಯಾಸ್‌ ಹಸ್ನೈನ್‌ನನ್ನು ಫೆಬ್ರುವರಿ 6ರಂದು ಜಮ್ಮುವಿನ ಕುಂಜ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.