ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಕಷ್ಟ ತಂದ ಪಕ್ಷ ಸೇರ್ಪಡೆ! ದೀದಿಯ ಬಲ ಹೆಚ್ಚಾಯ್ತು!ಕೋಲ್ಕತ್ತಾ: ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳ ಚುನಾವಣೆ ನಡೆಯಲಿದ್ದು, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಶನಿವಾರ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ 83 ವರ್ಷದ ಯಶವಂತ್ ಸಿನ್ಹಾ ಅವರು 2018ರಲ್ಲಿ ಬಿಜೆಪಿ ತೊರೆದಿದ್ದರು.

ಕೆಲ ತಿಂಗಳಿನಿಂದ ತೃಣಮೂಲ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಲವು ಮುಖಂಡರು ಹಾಗೂ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಟಿಎಂಸಿಗೆ ಹಿರಿಯ ಮುಖಂಡ ಯಶವಂತ್ ಸಿನ್ಹಾ ಸೇರ್ಪಡೆಯಾಗಿರುವುದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಬಲ ತಂದುಕೊಡುವುದೆಂದು ನಿರೀಕ್ಷಿಸಲಾಗಿದೆ.

ಕೋಲ್ಕತ್ತಾದ ತೃಣಮೂಲ ಕಾಂಗ್ರೆಸ್ ಭವನದಲ್ಲಿ ಟಿಎಂಸಿ ಮುಖಂಡರಾದ ಡೇರೆಕ್ ಒಬ್ರೀನ್, ಸುದೀಪ್ ಬಂಡೋಪಾಧ್ಯಾಯ, ಸುಬ್ರತಾ ಮುಖರ್ಜಿ ಅವರ ಉಪಸ್ಥಿತಿಯಲ್ಲಿ ಯಶವಂತ ಸಿನ್ಹಾ ಪಕ್ಷಕ್ಕೆ ಸೇರ್ಪಡೆಯಾದರು. “ಯಶವಂತ್ ಸಿನ್ಹಾ ಅವರು ನಮ್ಮ ಪಕ್ಷ ಸೇರುತ್ತಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ಮುಖರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ಪಕ್ಷ ಸೇರುವ ಮುನ್ನ ಯಶವಂತ್ ಸಿನ್ಹಾ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭ ಮಾತನಾಡಿರುವ ಸಿನ್ಹಾ, “ದೇಶವು ಅಡ್ಡಹಾದಿಯಲ್ಲಿದೆ. ನಾವು ನಂಬಿದ ಮೌಲ್ಯಗಳು ಅಪಾಯದಲ್ಲಿವೆ. ನ್ಯಾಯಾಂಗ ಸೇರಿದಂತೆ ಹಲವು ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ. ಈ ಚುನಾವಣೆ ಕೇವಲ ರಾಜಕೀಯ ಹೋರಾಟವಲ್ಲ, ಪ್ರಜಾಪ್ರಭುತ್ವ ಉಳಿಸುವ ಹೋರಾಟ” ಎಂದು ಹೇಳಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ, ಚೀನಾ ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಸಿನ್ಹಾ ಚರ್ಚೆ ನಡೆಸಿದರು.

1960ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಅವರು 1984ರಲ್ಲಿ ರಾಜಕೀಯಕ್ಕೆ ಕಾಲಿಟ್ಟು ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದರು. ನಂತರ ಬಿಜೆಪಿ ಸೇರಿದ್ದರು. 1990ರ ನವೆಂಬರ್‌ನಲ್ಲಿ ಸಿನ್ಹಾ ಅವರು ಕೇಂದ್ರ ಹಣಕಾಸು ಸಚಿವರಾದರು. ಡಿಸೆಂಬರ್ 1998ರಿಂದ ಜುಲೈ 2002ರವರೆಗೂ ವಾಜಪೇಯಿ ಅವರ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೇ 2004ರವರೆಗೂ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು.