ನೇಪಾಳದಲ್ಲೂ ಬಿಜೆಪಿ ಪಕ್ಷ! ಚಾಣಕ್ಯನ ಆಟಕ್ಕೆ ನೇಪಾಳ ಕಂಗಾಲು!ನವದೆಹಲಿ: ಭಾರತೀಯ ಜನತಾ ಪಕ್ಷದ ಸರ್ಕಾರಗಳನ್ನು ವಿದೇಶಗಳಲ್ಲಿಯೂ ಸ್ಥಾಪನೆ ಮಾಡುವುದಷ್ಟೇ ಬಾಕಿ ಇದೆ ಎಂದು ಅಮಿತ್ ಶಾ ಹೇಳಿದ್ದಾರೆನ್ನಲಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ನೇಪಾಳ ತೀವ್ರ ಆತಂಕ ವ್ಯಕ್ತಪಡಿಸಿದೆ. ವಿದೇಶಗಳಿಗೂ ಭಾರತೀಯ ಜನತಾ ಪಕ್ಷವನ್ನು ವಿಸ್ತರಿಸುವ ಬಗ್ಗೆ ಅಮಿತ್ ಶಾ ಮಾತನಾಡಿದ್ದರು ಎಂದು ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇವ್ ಸಾರ್ವಜನಿಕ ಸಭೆಯೊಂದರಲ್ಲಿ ಉಲ್ಲೇಖಿಸಿದ್ದರು.

ಇದನ್ನು ಗಮನಿಸಿರುವ ಭಾರತದಲ್ಲಿರುವ ನೇಪಾಳದ ರಾಯಭಾರಿ ನಿಲಾಂಬರ್ ಆಚಾರ್ಯ ಭಾರತೀಯ ವಿದೇಶಾಂಗ ಸಚಿವಾಲಯದಲ್ಲಿರುವ ನೇಪಾಳ ಹಾಗೂ ಭೂತಾನ್ ನ ಜಂಟಿ ಕಾರ್ಯದರ್ಶಿ ಉಸ್ತುವಾರಿ ಅರಿಂದಂ ಬಾಗ್ಚಿ ಅವರಿಗೆ ಕರೆ ಮಾಡಿದ್ದು, ಅಮಿತ್ ಶಾ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸ್ಪಷ್ಟನೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಮನವಿಗೆ ಸ್ಪಂದಿಸಿರುವ ಭಾರತೀಯ ಅಧಿಕಾರಿಗಳು ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಬಿಪ್ಲಬ್ ದೇವ್ ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದನ್ನು ಗಮನಿಸಿದ್ದು, ಇದು ದುರದೃಷ್ಟಕರ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತ್ರಿಪುರಾದ ಮುಖ್ಯಮಂತ್ರಿ, ಬಿಜೆಪಿ, ಶ್ರೀಲಂಕಾ, ನೇಪಾಳ ಸೇರಿದಂತೆ ನೆರೆ ರಾಷ್ಟ್ರಗಳಲ್ಲಿಯೂ ಸರ್ಕಾರ ರಚಿಸಲು ಯೋಜನೆ ನಡೆಸುತ್ತಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾಗಿ ತಿಳಿಸಿದ್ದರು.

ತ್ರಿಪುರಾಗೆ ಅಮಿತ್ ಶಾ ಅವರು ಭೇಟಿ ನೀಡಿದ್ದರು, ಸರ್ಕಾರಿ ಅತಿಥಿ ಗೃಹದಲ್ಲಿ ಈಶಾನ್ಯ ವಲಯದ ಬಿಜೆಪಿ ಕಾರ್ಯದರ್ಶಿ ಅಜಯ್ ಜಮ್ವಾಲ್ ಅವರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಬಿಜೆಪಿ ಭಾರತದ ಹಲವು ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ ಎಂದು ಅಜಯ್ ಜಮ್ವಾಲ್ ಹೇಳಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಈಗ ಶ್ರೀಲಂಕಾ ಹಾಗೂ ನೇಪಾಳ ಬಾಕಿ ಉಳಿದಿದೆ ಎಂದು ಹೇಳಿದ್ದಾಗಿ ಬಿಪ್ಲಬ್ ದೇವ್ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.

ಇದನ್ನೂ ಓದಿ :  ಕೇಂದ್ರ ಸಚಿವ ಸಂಪುಟಕ್ಕೆ ಯಾರು ಎಂಟ್ರಿ ?