ಬಿಜೆಪಿ ಯುವ ಮುಖಂಡ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು, ಯಾಕಾಗಿ? ಇಲ್ಲಿದೆ ನೋಡಿ!

ಕೊಯಂಬತ್ತೂರು: ಕಾನೂನುಬಾಹಿರ ಸಭೆ ನಡೆಸಿದ ಕಾರಣದಿಂದ ಮೂರು ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಹಾಗೂ ಕೆಲ ಪಕ್ಷದ ಕಾರ್ಯಕರ್ತರ ವಿರುದ್ಧ ಕೊಯಂಬತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಯಂಬತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಗುರುವಾರ ಅಣ್ಣಾಮಲೈ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅದ್ದೂರಿಯಿಂದ ಸ್ವಾಗತಿಸಿದ್ದರು. ಆದರೆ, ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಪಕ್ಷದ ಕಚೇರಿಯಲ್ಲಿ ಬಹಳಷ್ಟು ಕಾರ್ಯಕರ್ತರು ಸೇರಿರುವುದು ಕಂಡುಬಂದಿತ್ತು.

ಅಲ್ಲದೇ, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಕೆ.ಅಣ್ಣಾಮಲೈ ವಾಹನವೊಂದರಿಂದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಇದರ ಆಧಾರದ ಮೇಲೆ ಸಬ್‌ ಇನ್ಸ್‌ಪೆಕ್ಟರ್ ಸುಗನ್ಯಾ ನೀಡಿದ ದೂರಿನ ಆಧಾರದ ಮೇಲೆ, ಕತ್ತೂರು ಪೊಲೀಸರು ಕೆ.ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ಬಿಜೆಪಿ ರಾಜ್ಯ ಮಟ್ಟದ ನಾಯಕರಾದ ಜಿಕೆಎಸ್ ಸೆಲ್ವಕುಮಾರ್, ಎಸ್.ಆರ್.ಸೇಕರ್ ಮತ್ತು ಕನಗಸಬಪತಿ ಮತ್ತು ಇತರ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.