ಈ ತಿಂಗಳಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆ; ಪೆಟ್ರೋಲಿಯಂ ಸಚಿವ ಸ್ಪಷ್ಟನೆ!ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದಾಗ ಇತರೆ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗುವುದು ಸಹಜ. ಅದರಿಂದಾಗಿ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಇಂದು ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಚಳಿಗಾಲ ಮುಗಿದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಆಗಲಿದೆ ಎಂದು‌ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರಾದ್ಯಂತ ಫೆಡರೇಷನ್ ಆಫ್ ಆಲ್ ಇಂಡಿಯಾ ಟೇಡರ್ಸ್ ಪ್ರತಿಭಟನೆಯನ್ನೂ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಸದ್ಯ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆ ಅನುಸಾರವಾಗಿ ದರ ನಿಗದಿ ಆಗುತ್ತಿದೆ. ಚಳಿಗಾಲ ಮುಗಿದ ಮೇಲೆ ಸ್ವಲ್ಪ ಮಟ್ಟಿಗೆ ಇಳಿಕೆ ಆಗಲಿದೆ ಎಂದು‌ ತಿಳಿಸಿದ್ದಾರೆ.

ಕಳೆದ 54 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 25 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.68 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 15ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 18 ದಿನಗಳಿಂದ 4.72 ಪೈಸೆ ಬೆಲೆ ಹೆಚ್ಚಳ ಮಾಡಲಾಗಿತ್ತು.