ಮ್ಯಾನ್ಮಾರ್ ನಲ್ಲಿ ಪರಿಸ್ಥಿತಿ ಗಂಭೀರ! ಹಿಂಸಾಮಾರ್ಗ ಅನುಸರಿಸಿದ ಪೊಲೀಸರು!?ಐಜ್ವಾಲ್: ಮ್ಯಾನ್ಮಾರ್‌ನಲ್ಲಿ ಸೇನೆ ಆಡಳಿತವನ್ನು ಖಂಡಿಸಿ ನಡೆದಿರುವ ಹೋರಾಟವನ್ನು ಹತ್ತಿಕ್ಕಲು ಪೊಲೀಸರಿಗೆ ಹಿಂಸಾ ಮಾರ್ಗ ಅನುಸರಿಸಲು ಮಿಲಿಟರಿ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಜನರ ಮೇಲೆ ಗುಂಡು ಹಾರಿಸಲು ನಿರಾಕರಿಸಿದ ಅಲ್ಲಿನ ಪೊಲೀಸರು ಭಾರತಕ್ಕೆ ಓಡಿ ಬಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಮ್ಯಾನ್ಮಾರ್‌ನ ಮಿಲಿಟರಿ ವಿರುದ್ಧ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಆಕ್ರೋಶ ಹೊರಹಾಕಿವೆ. ಈಗ ನಿರಾಶ್ರಿತರ ಬಗ್ಗೆ ಮಿಜಾರೋಂ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.

ಮ್ಯಾನ್ಮಾರ್ ಪೊಲೀಸರಿಗೆ ಮಿಜೋರಾಂನಲ್ಲಿ ರಾಜಕೀಯ ಆಶ್ರಮ ಒದಗಿಸಲು ಅನುಮತಿ ನೀಡುವಂತೆ ಮಿಜೋರಾಂ ಸಿಎಂ ಜೋರಾಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಪತ್ರ ಬರೆದಿದ್ದಾರೆ. ಎನ್ಡಿಎ ಮಿತ್ರ ಪಕ್ಷವಾಗಿರುವ ಮಿಜೋ ನ್ಯಾಷನಲ್ ಫ್ರಂಟ್ ನಿರಾಶ್ರಿತರ ಪರ ದನಿಯೆತ್ತಿದೆ. ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ನಿರಾಶ್ರಿತರು ಜೀವಭಯದಿಂದ ತತ್ತರಿಸಿದ್ದಾರೆ, ಅವರಿಗೆ ರಕ್ಷಣೆ ಒದಗಿಸುವುದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಆದ್ಯತೆಯಾಗಬೇಕಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಮಿಜೋ ಹಾಗೂ ಮ್ಯಾನ್ಮಾರ್ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲಿನ ಜನತೆ ಕಷ್ಟಕ್ಕೆ ನಾವು ಸ್ಪಂದಿಸಬೇಕಿದೆ, ಆರ್ತನಾದ ಕೇಳಿಸುವಾಗ ಗಡಿ ಬಾಗಿಲು ಬಂದ್ ಮಾಡಿ ಕುಳಿತುಕೊಳ್ಳಲು ಆಗುವುದಿಲ್ಲ, ಮಾನವೀಯತೆಗೆ ಬೆಲೆ ನೀಡಬೇಕಿದೆ ಎಂದು ಸುದೀರ್ಘ ಪತ್ರದಲ್ಲಿ ಹೇಳಿದ್ದಾರೆ.

ಮ್ಯಾನ್ಮಾರ್‌ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಕಣ್ಣೀರು ಹಾಕುತ್ತಾ ಪರಿಸ್ಥಿತಿ ವಿವರಿಸಿರುವ ಪೊಲೀಸರು
ಕೆಲ ದಿನಗಳ ಹಿಂದೆ ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರನ್ನು ವಶಕ್ಕೆ ನೀಡಿ ಎಂದು ಒತ್ತಾಯಿಸಿ ಮ್ಯಾನ್ಮಾರ್‌ ಪತ್ರ ಬರೆದಿತ್ತು. ಉಭಯ ರಾಷ್ಟ್ರಗಳ ಸಂಬಂಧ ಮುಂದುವರಿಯಲು ಪೊಲೀಸ್‌ ಅಧಿಕಾರಿಗಳನ್ನು ಮ್ಯಾನ್ಮಾರ್‌ಗೆ ಹಸ್ತಾಂತರಿಸಿ ಅಂತಾ ಮಿಜೋರಾಂ ರಾಜ್ಯದ ಚಂಪೈ ಜಿಲ್ಲೆಯ ಉಪ ಆಯುಕ್ತೆಗೆ ಮ್ಯಾನ್ಮಾರ್‌ನ ಅಧಿಕಾರಿಗಳು ಪತ್ರ ಬರೆದಿದ್ದರು. ಪತ್ರ ಬರೆದ ಕೆಲವೇ ದಿನದಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರು ಅಲ್ಲಿನ ಭಯಾನಕ ಸ್ಥಿತಿಯನ್ನ ಬಿಡಿಸಿಟ್ಟಿದ್ದಾರೆ. ಮ್ಯಾನ್ಮಾರ್ ಜನರ ಸದ್ಯದ ಪರಿಸ್ಥಿತಿ ಹಾಗೂ ಹಿಂಸೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.

ಮ್ಯಾನ್ಮಾರ್‌ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಮ್ಯಾನ್ಮಾರ್‌ನ ತತ್ತರಿಸುವಂತೆ ಮಾಡಿದೆ
ಮ್ಯಾನ್ಮಾರ್‌ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿ, ಮ್ಯಾನ್ಮಾರ್‌ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿದೆ. ಸೇನೆ ಹಿಡಿತಕ್ಕೆ ಹೋದ ನಂತರ ಮ್ಯಾನ್ಮಾರ್‌ ಅಕ್ಷರಶಃ ನರಕವಾಗಿದ್ದು, ಸೇನೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಜನ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಕೂಡ, ಸೇನಾಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿ ಕದಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 50 ಜನರನ್ನು ಗುಂಡು ಹಾರಿಸಿ ಕೊಂದು ಹಾಕಿದೆ ಮ್ಯಾನ್ಮಾರ್ ಮಿಲಿಟರಿ, ಮಹಿಳೆಯರು, ಮಕ್ಕಳು ಎಂದು ನೋಡದೆ ಹಿಂಸಾಚಾರ ಮಾರ್ಗದಲ್ಲಿ ದುರಾಡಳಿತ ನಡೆಸುತ್ತಿದೆ ಎಂದು ವರದಿಗಳು ಬಂದಿವೆ. ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್‌ನ ತತ್ತರಿಸುವಂತೆ ಮಾಡಿದೆ.

ಮ್ಯಾನ್ಮಾರ್‌ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಭಾರತ ಹಾಗೂ ಮ್ಯಾನ್ಮಾರ್ ಗಡಿ 1643 ಕಿ.ಮೀ ಹಂಚಿಕೆಯಾಗಿದೆ. ಮಿಜೋರಾಂನ ಛಂಫಾಯಿ ಹಾಗೂ ಶೇರ್ಛಿಪ್ ಗಡಿ ದಾಟಿ ಈ ಸಿಬ್ಬಂದಿಗಳು ಬಂದಿದ್ದಾರೆ. ಸಿಬ್ಬಂದಿಗಳು ನಿಶಸ್ತ್ರಧಾರಿಗಳಾಗಿದ್ದರು, ಕೆಳ ಸ್ತರದ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಪ್ತಚರ ವರದಿ ಪ್ರಕಾರ ಭಾರತದತ್ತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಕೋರಿ ಮ್ಯಾನ್ಮಾರ್ ಜನರು ಬರಲಿದ್ದಾರೆ. ಮ್ಯಾನ್ಮಾರ್ ದೇಶದಲ್ಲಿ ಸಂವಹನ ಸಾಧನಗಳನ್ನು ಸೇನೆ ಕಂಟ್ರೋಲ್‌ಗೆ ತೆಗೆದುಕೊಂಡಿದೆ ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಮಿಲಿಟರಿ ಆದೇಶ ಪಾಲಿಸಿ, ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಲು ಮನಸ್ಸಾಗಲಿಲ್ಲ ಹಾಗಾಗಿ, ದೇಶ ತೊರೆದು ಬರಬೇಕಾಯಿತು ಎಂದು ಮ್ಯಾನ್ಮಾರ್ ಪೊಲೀಸ್ ಪಡೆಯ ನಿರಾಶ್ರಿತ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಮ್ಯಾನ್ಮಾರ್‌ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ
ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್‌ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ.