ಮೋದಿಯವರ ಮನ್ ಕೀ ಬಾತ್ ನ 10 ಮುಖ್ಯ ಅಂಶಗಳು!ನವದೆಹಲಿ: “ಮಾಘ ಮಾಸದಲ್ಲಿ ಯಾವುದೇ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯ ಎಂದು ಭಾವಿಸಲಾಗುತ್ತದೆ. ನದಿಯೊಂದಿಗೆ ನಮ್ಮ ಜೀವನ ಸಂಪ್ರದಾಯಿಕವಾಗಿ ಬೆಸೆದುಕೊಂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

“ಈ ಬಾರಿ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತಿದೆ. ನದಿಗಳು ಜನರ ಜೀವನ ಮತ್ತು ವಿಕಾಸಕ್ಕೆ ಅಗತ್ಯವಾಗಿವೆ. ನಾವು ನೀರಿನ ಸಂರಕ್ಷಣೆಗೆ ಪ್ರತಿದಿನ ಕೆಲಸ ಮಾಡಬೇಕು” ಎಂದು ಮೋದಿ ಕರೆ ನೀಡಿದರು.

“ಪರಿಸರವನ್ನು ಉಳಿಸುವ ಕುರಿತು ಪಶ್ಚಿಮ ಬಂಗಾಳದ ಸುಜಿತ್ ಜೀ ಅವರು ನನಗೆ ಪತ್ರ ಬರೆದಿದ್ದಾರೆ. ನದಿ, ಕೃಷಿ ಭೂಮಿ ಹೀಗೆ ವಿವಿಧ ರೀತಿಯ ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕು” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

* ಉತ್ತರಾಖಂಡ್‌ನಲ್ಲಿ ಜಗದೀಶ್ ನೀರಿನ ಮೂಲದ ಸಂರಕ್ಷಣೆಗೆ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಜಗದೀಶ್ ಅವರು ಗ್ರಾಮದಲ್ಲಿ ನೂರಾರು ಮರಗಳನ್ನು ನೆಟ್ಟರು. ಈಗ ನೀರಿನ ಮೂಲಗಳು ಪುನಃ ಭರ್ತಿಯಾಗಿವೆ. ನೀರಿನ ಸಂರಕ್ಷಣೆಗೆ ಸಾಮೂಹಿಕ ಜವಾಬ್ದಾರಿಯಾಗಿದೆ. ಜನರು ಇದನ್ನು ಅರಿಯಬೇಕು.

* ಜಲಶಕ್ತಿ ಅಭಿಯಾನ ಎಂಬ 100 ದಿನದ ಅಭಿಯಾನವನ್ನು ಆರಂಭಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ ಇದನ್ನು ಜಾರಿಗೊಳಿಸುತ್ತಿದೆ. ಮಳೆ ನೀರನ್ನು ಇಂಗಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

* ಸಂತ ರವಿದಾಸ್ ಅವರು ಸಮಾಜದ ವಿಕೃತಿಗಳ ಬಗ್ಗೆ ಧ್ವನಿ ಎತ್ತಿದರು. ಅದನ್ನು ಪರಿಹರಿಸಲು ಆಧ್ಯಾತ್ಮಿಕ ಮಾರ್ಗವನ್ನು ತಿಳಿಸಿದರು. ಅವರು ನನ್ನ ಕ್ಷೇತ್ರವಾದ ವಾರಣಾಸಿಯವರು. ಯುವಕರಿಗಾಗಿ ಸಂತ ರವಿದಾಸ್ ಹಲವಾರು ಸಂದೇಶಗಳನ್ನು ನೀಡಿದ್ದಾರೆ. ನೀವು ಸ್ವಚ್ಛ ಮನಸ್ಸಿನಿಂದ ಕೆಲಸವನ್ನು ಮಾಡಿ ಯಶಸ್ಸು ನಿಮಗೆ ಸಿಗುತ್ತದೆ ಎಂದು ಎಲ್ಲಾ ಯುವಕರಿಗೆ ಕರೆ ಕೊಟ್ಟಿದ್ದಾರೆ. ನಿಮ್ಮ ಕಾಲಿನ ಮೇಲೆ ನಿಲ್ಲಿ ಎಂದು ಅವರು ಕರೆ ನೀಡಿದ್ದಾರೆ.

* ಇಂದು ರಾಷ್ಟ್ರೀಯ ವಿಜ್ಞಾನ ದಿನ. ಕೇರಳದ ಯೋಗೇಶ್ವರ್ ಅವರು ನಮೋ ಅಪ್ಲಿಕೇಶನ್‌ನಲ್ಲಿ ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ನಾವು ಭಾರತದ ವಿಜ್ಞಾನಿಗಳ ಬಗ್ಗೆ ಅಧ್ಯಯನ ನಡೆಸಬೇಕು, ಯುವಕರು ಅದನ್ನು ತಿಳಿಯಬೇಕು.

* ವಿಜ್ಞಾನ ಎಂದರೆ ಫಿಸಿಕ್ಸ್, ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹೈದರಾಬಾದ್‌ ಮೂಲದ ರೈತ ವೆಂಕಟ ರೆಡ್ಡಿ ಅವರು ವಿಟಮಿನ್ ಯುಕ್ತ ಬೆಳೆಗಳನ್ನು ಬೆಳೆಯುವ ಮೂಲಕ ಹೊಲದಲ್ಲಿ ಪ್ರಯೋಗ ಮಾಡಿದ್ದಾರೆ. ತಮ್ಮ ಸಾಧನೆಗಾಗಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

* ಚೀಯಾ ಬೀಜಗಳ ಕುರಿತು ಇಂದಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶದ ರೈತರೊಬ್ಬರು ಚೀಯಾ ಬೀಜಗಳನ್ನು ಬೆಳೆಯುತ್ತಿದ್ದಾರೆ. ಇದರ ಮೂಲಕ ಆತ್ಮನಿರ್ಭಯ ಭಾರತ ಘೋಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

* ಕೋಲ್ಕತ್ತಾದ ರಂಜನ್ ಬಾಬು ಅವರು ಪತ್ರದಲ್ಲಿ ಹಲವಾರು ಪ್ರಶ್ನೆಯನ್ನು ಕೇಳಿದ್ದಾರೆ. ಆತ್ಮ ನಿರ್ಭರ ಭಾರತದಿಂದ ನಮಗೆ ಏನು ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಸರ್ಕಾರದ ನೀತಿಯಲ್ಲ ಇದು ನಮ್ಮ ಸ್ಪೂರ್ತಿಯಾಗಿದೆ ಎಂದು ಅವರೇ ಉತ್ತರವನ್ನು ನೀಡಿದ್ದಾರೆ.

* ಆಕಾಶದದಲ್ಲಿ ನಾವು ದೇಶೀಯ ನಿರ್ಮಿತ ತೇಜಸ್ ವಿಮಾನ ನೋಡುತ್ತೇವೆ. ಮೆಟ್ರೋ ರೈಲಿನಲ್ಲಿ ದೇಶದಲ್ಲಿ ನಿರ್ಮಾಣವಾದ ಕೋಚ್ ನೋಡುತ್ತೇವೆ. ಭಾರತ ನಿರ್ಮಿತ ಕೋವಿಡ್ ಔಷಧಿ ವಿಶ್ವದ ವಿವಿಧ ದೇಶಗಳಿಗೆ ತಲುಪಿದೆ.

* ದೆಹಲಿಯಲ್ಲಿ ಎಲ್‌ಇಡಿ ಬಲ್ಪ್ ಮಾಡುತ್ತಿದ್ದ ನೌಕರರು ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದರು. ಬಳಿಕ ಅವರು ತಮ್ಮ ಗ್ರಾಮದಲ್ಲಿಯೇ ಎಲ್‌ಇಡಿ ಬಲ್ಪ್ ಮಾಡುವ ಕಾರ್ಖಾನೆ ತೆಗೆದಿದ್ದಾರೆ. ನೌಕರರಾಗಿದ್ದವರು ಈಗ ಮಾಲೀಕರಾಗಿದ್ದಾರೆ.