ಪ್ರಣವ್ ಮುಖರ್ಜಿ ಅವರ ಆತ್ಮಚರಿತ್ರೆಯಲ್ಲಿವೆ ಕಾಂಗ್ರೆಸ್ ಸೋಲಿಗೆ ಕಾರಣರಾದ ಪ್ರಮುಖ ನಾಯಕರುಗಳ ಹೆಸರು?!ನವದೆಹಲಿ: ಚುನಾವಣೆಗಳಲ್ಲಿನ ಸತತ ಸೋಲು ಮತ್ತು ಪಕ್ಷವು ಶಕ್ತಿಹೀನವಾಗಿರುವುದರ ಕುರಿತು ಕಾಂಗ್ರೆಸ್‌ನ ಅನೇಕ ಮುಖಂಡರು ಪಕ್ಷದ ನಾಯಕತ್ವದ ವಿರುದ್ಧ ನೇರವಾಗಿ ಧ್ವನಿ ಎತ್ತಿದ್ದರು. ಆದರೆ ಈಗ ಪ್ರಣವ್ ಮುಖರ್ಜಿ ಅವರ ಆತ್ಮಚರಿತ್ರೆಯ ಅಂತಿಮ ಆವೃತ್ತಿಯು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು 2014ರ ಸಾರ್ವತ್ರಿಕ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೂಷಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ತಾವು ಪ್ರಧಾನಿಯಾಗಿದ್ದರೆ ಪಕ್ಷ ಸೋಲು ಅನುಭವಿಸುತ್ತಿರಲಿಲ್ಲ ಎಂದು ಕಾಂಗ್ರೆಸ್‌ನ ಕೆಲವು ಸದಸ್ಯರು ಅಭಿಪ್ರಾಯ ಹೊಂದಿದ್ದರು ಎಂದು ಸಹ ಪ್ರಣವ್ ಹೇಳಿದ್ದಾರೆ. ‘ನಾನು 2004ರಲ್ಲಿ ಪ್ರಧಾನಿಯಾಗಿದ್ದರೆ ಪಕ್ಷವು 2014ರ ಲೋಕಸಭೆ ಚುನಾವಣೆಯ ಸೋಲನ್ನು ತಪ್ಪಿಸಿಕೊಳ್ಳಬಹುದಾಗಿತ್ತು ಎಂದು ಕಾಂಗ್ರೆಸ್‌ನ ಕೆಲವು ಸದಸ್ಯರು ಹೇಳಿದ್ದರು. ಈ ದೃಷ್ಟಿಕೋನವನ್ನು ನಾನು ಅನುಮೋದಿಸದೆ ಇದ್ದರೂ, ನನ್ನನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ ಬಳಿಕ ಪಕ್ಷದ ನಾಯಕತ್ವವು ರಾಜಕೀಯ ಗಮನವನ್ನು ಕಳೆದುಕೊಂಡಿತ್ತು ಎಂದು ನನಗೆ ಅನಿಸಿದೆ’ ಎಂದು ಪ್ರಣವ್ ಮುಖರ್ಜಿ ಅವರು ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

‘ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದೆಡೆ ಸದನದಿಂದ ಮನಮೋಹನ್ ಸಿಂಗ್ ಅವರ ಸುದೀರ್ಘ ಗೈರು ಇತರೆ ಸಂಸದರ ಜತೆಗಿನ ಯಾವುದೇ ವೈಯಕ್ತಿಕ ಸಂಪರ್ಕಕ್ಕೆ ಅಂತ್ಯಹಾಡಿತು’ ಎಂದು ಪ್ರಣವ್ ಅವರು ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್’ ಕೃತಿಯಲ್ಲಿ ಬರೆದಿದ್ದಾರೆ. ರೂಪಾ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 2012ರಲ್ಲಿ ರಾಷ್ಟ್ರಪತಿಯಾಗಿ ನೇಮಕವಾಗುವವರೆಗೂ ಕಾಂಗ್ರೆಸ್ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿದ್ದರು. ಅವರು ರಾಷ್ಟ್ರಪತಿಯಾದ ಬಳಿಕದ ಅನುಭವಗಳ ಕುರಿತಾದ ಪುಸ್ತಕದಲ್ಲಿ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇಬ್ಬರು ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅವರ ಉತ್ತರಾಧಿಕಾರಿ ನರೇಂದ್ರ ಮೋದಿ ಅವರ ಜತೆಗೆ ಕಾರ್ಯನಿರ್ವಹಿಸಿರುವ ಪ್ರಣವ್ ಅವರು ಇಬ್ಬರನ್ನೂ ಹೋಲಿಸಿದ್ದಾರೆ. ‘ಆಡಳಿತ ನಡೆಸುವ ನೈತಿಕ ಅಧಿಕಾರ ಪ್ರಧಾನಿಗೆ ಇರುತ್ತದೆ ಎಂದು ನಾನು ನಂಬಿದ್ದೇನೆ. ಒಟ್ಟಾರೆ ದೇಶದ ನಡೆಯು ಪ್ರಧಾನ ಮಂತ್ರಿ ಮತ್ತು ಅವರ ಆಡಳಿತದ ಕಾರ್ಯಾಚರಣೆಯ ಪ್ರತಿಫಲನವಾಗಿರುತ್ತದೆ.

ಡಾ. ಸಿಂಗ್ ಅವರು ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿ ಮುಳುಗಿದ್ದರೆ, ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದು ತಮ್ಮ ಮೊದಲ ಅವಧಿಯಲ್ಲಿ ಸರ್ಕಾರ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಬಂಧ ಕಹಿಯಾಗಿದ್ದಂತೆ ಒಂದು ರೀತಿ ನಿರಂಕುಶಾಧಿಕಾರದ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಈ ಸರ್ಕಾರದ ಎರಡನೆಯ ಅವಧಿಯಲ್ಲಿ ಅಂತಹ ವಿಷಯಗಳಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆಯೇ ಎಂಬುದನ್ನು ಕಾಲವೇ ಹೇಳಲಿದೆ’ ಎಂದಿದ್ದಾರೆ. ಪ್ರಣವ್ ಅವರ ಪುಸ್ತಕದಲ್ಲಿ, ಮೋದಿ ಅವರು ವಿವಿಧ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದು, ಅವುಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, 2016ರ ನೋಟು ರದ್ದತಿ ಮುಂತಾದವುಗಳನ್ನು ಸಹ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಪ್ರಣವ್ ಅವರು ತಮ್ಮ ಹಿಂದಿನ ಪುಸ್ತಕಗಳಲ್ಲಿಯೂ ಕಾಂಗ್ರೆಸ ನಾಯಕತ್ವದಲ್ಲಿನ ಲೋಪಗಳು, ಸಂಕೀರ್ಣ ಸಂಬಂಧಗಳ ಬಗ್ಗೆ ನೇರವಾಗಿ ಬರೆದುಕೊಂಡಿದ್ದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/