ಏನಿದು ಬಿಸಿಬಿಸಿ ಭೇಟಿ?ಉತ್ತರ ಪ್ರದೇಶ ಸರ್ಕಾರದಲ್ಲಿ ಸಂಪುಟ ಪುನರ್ ರಚನೆ ವಿಚಾರ ಸಿಎಂ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಉನ್ನತ ನಾಯಕರ ಮಧ್ಯೆ ಕಸಿವಿಸಿ ಸೃಷ್ಟಿಸಿರುವ ಮಧ್ಯೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗಿ ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಷಾರನ್ನು ಯೋಗಿ ಗುರುವಾರ ಭೇಟಿಯಾಗಿದ್ದರು. ಈ ವೇಳೆ ಸಂಪುಟ ಪುನರ್ ರಚನೆ ಅನಿವಾರ್ಯತೆ ಹಾಗೂ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಬಗ್ಗೆಯೂ ಷಾ ಸಲಹೆ ನೀಡಿದ್ದಾರೆನ್ನಲಾಗಿದೆ.

ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 2024 ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿ ಬಹುಮುಖ್ಯ. ಹೀಗಾಗಿಯೇ, ಜಾತಿ ಸಮೀಕರಣ, ಸ್ಥಳೀಯ ಆದ್ಯತೆ ಪರಿಗಣಿಸಿ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ವರಿಷ್ಠರು ಉದ್ದೇಶಿಸಿದ್ದಾರೆ. ಮುಖ್ಯವಾಗಿ, ತಮ್ಮ ಆಪ್ತ, ವಿಧಾನಪರಿಷತ್ ಸದಸ್ಯ ಅರವಿಂದ ಕುಮಾರ್ ಶರ್ಮಗೂ ಪ್ರಬಲ ಹುದ್ದೆ ನೀಡಲು ಮೋದಿ ಬಯಸಿದ್ದಾರೆ. ಆದರೆ ಇದಕ್ಕೆ ಯೋಗಿ ಅಸಮ್ಮತಿ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅಲ್ಲದೆ, ಬಿಜೆಪಿಯ ಕೆಲ ಶಾಸಕರು ಕೂಡ ಯೋಗಿ ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳ ಮಾತನ್ನು ಕೇಳಿಕೊಂಡು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಎಲ್ಲಾ ಕಾರಣಗಳಿಗಾಗಿ ಯೋಗಿ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ವರಿಷ್ಠರ ಸಲಹೆಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸುವಲ್ಲಿ ದಿಲ್ಲಿ ನಾಯಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಮೋಹನ್ ಸಿಂಗ್ ಉತ್ತರ ಪ್ರದೇಶಕ್ಕೆ ತೆರಳಿ, ವಿವಿಧ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ನಂತರ ಪಕ್ಷ ಮತ್ತು ಸರ್ಕಾರದ ಸ್ಥಿತಿಗತಿಗಳ ಬಗ್ಗೆ ಹೈಕಮಾಂಡಿಗೂ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ವರಿಷ್ಠರು ಮನಸ್ಸು ಮಾಡಿದ್ದರು.