2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವಲ್ಲಿ ನಟ ದರ್ಶನ್ ಹಾಗೂ ಯಶ್ ತುಂಬಾನೇ ಪ್ರಮುಖ ಪಾತ್ರವಹಿಸಿದ್ದರು. ಇವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೋಡೆತ್ತು ಎಂದು ಕರೆದಿದ್ದರು. ನಂತರ ದರ್ಶನ್-ಯಶ್ ಜೋಡಿಗೆ ಜೋಡೆತ್ತು ಎನ್ನುವ ಹೆಸರು ಬಿದ್ದಿತ್ತು. ಜೋಡೆತ್ತಿನ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಅನೇಕರದ್ದಾಗಿತ್ತು.
ಮೊದಲನೆಯದಾಗಿ ಮಲ್ಟಿ ಸ್ಟಾರರ್ ಸಿನಿಮಾ ಬಗ್ಗೆ ಮಾತನಾಡಿದ ದರ್ಶನ್, ಮಲ್ಟಿ ಸ್ಟಾರರ್ ಸಿನಿಮಾ ಮಾಡೋದು ಸುಲಭದ ಮಾತಲ್ಲ. ಇಬ್ಬರು ಹೀರೋಗಳನ್ನು ನಿಭಾಯಿಸಿಕೊಂಡು ಹೋಗುವ ನಿರ್ದೇಶಕರು ಬೇಕು. ಎರಡು ನಟರನ್ನು ಹಾಕಿ ಸಿನಿಮಾ ಮಾಡುವಾಗ ಇಬ್ಬರಿಗೂ ಅಭಿಮಾನಿಗಳು ಇರುತ್ತಾರೆ. ಒಬ್ಬ ನಟನಿಗೆ ಹೊಡೆದರೆ ಮತ್ತೋರ್ವನಿಗೆ ಬೇಸರ ಆಗುತ್ತದೆ. ಹೀಗಾಗಿ, ಪ್ರತಿ ದೃಶ್ಯಗಳನ್ನು ಅಳೆದು ತೂಗಿ ಸಿದ್ಧಪಡಿಸುವ ನಿರ್ದೇಶಕರು ಬೇಕು ಎಂದಿದ್ದಾರೆ ದರ್ಶನ್.
ಈ ವೇಳೆ ಜೋಡೆತ್ತಿನ ಸಿನಿಮಾ ಬರೋದು ಯಾವಾಗ ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರ ನೀಡಿದ್ದಾರೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ನಮ್ಮ ಹೀರೋ ಜತೆ ನಟಿಸೋಕೆ ನಮಗೇನು ಎಂದು ಕೇಳಿದ್ದಾರೆ. ಈ ಮೂಲಕ ಯಾವುದಾದರೂ ಒಳ್ಳೆಯ ನಿರ್ದೇಶಕರು ಸಿಕ್ಕರೆ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.