ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತ ಬಾಲಚಂದ್ರ ಜಾರಕಿಹೊಳಿ ಮಾಡಿದ ಕೆಲಸ ಇದು!ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ನಿನ್ನೆಯೇ ಬಾಲಚಂದ್ರ ಜಾರಕಿಹೊಳಿ ಅವರು ನಾಗ್ಪೂರಕ್ಕೆ ತೆರಳಿದ್ದು, ಅಲ್ಲಿಂದ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಅವರ ‘ಸಿಡಿ’ ಬಿಡುಗಡೆ ಬಳಿಕ ಬಿಜೆಪಿಗೆ ಭಾರಿ ಮುಜುಗುರವಾಗಿದೆ. ಇದೇ ಹಿನ್ನೆಲೆಯಲ್ಲಿ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಸೂಚಿಸಿತ್ತು. ರಾಜೀನಾಮೆ ಸಲ್ಲಿಸಿದ ಬಳಿಕ ನಾನು ನಿರಪರಾಧಿ ಅಂತಾ ರಮೇಶ್ ಜಾರಕಿಹೊಳಿ ಅವರು ಹೇಳಿಕೆ ಕೊಟ್ಟಿದ್ದರು.

ಇದೀಗ ಅಧಿಕೃತವಾಗಿ ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸುವುದರೊಂದಿಗೆ ಎಸ್‌ಐಟಿ ತನಿಖೆಗೆ ಬಲ ಬಂದಿದೆ. ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ನಾಗಪುರ ಹಾಗೂ ದೆಹಲಿಯಲ್ಲಿ ಪಕ್ಷದ ಪ್ರಮುಖರನ್ನು ಭೇಟಿ ಮಾಡಿರುವ ಮಾಹಿತಿ ಬಂದಿದೆ.

ಹೈಕಮಾಂಡ್ ಭೇಟಿ ಮಾಡಿದ ರಮೇಶ್ ಸಹೋದರ
ಹೈಕಮಾಂಡ್‌ಗೆ ಮಾಹಿತಿ ಕೊಟ್ಟ ಬಾಲಚಂದ್ರ ಜಾರಕಿಹೊಳಿ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿ ಅವರನ್ನು ರಾಜಕೀಯವಾಗಿ ತೇಜೋವಧೆ ಮಾಡಲು ವಿಡಿಯೊ ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಜಾರಕಿಹೊಳಿ ಸಹೋದರರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ರಾಷ್ಟ್ಟೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ
ಪ್ರಭಾವಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುರಿತ ಸಿಡಿ ಬಿಡುಗಡೆಯಾಗುವ ಕುರಿತು ಪಕ್ಷದ ಹೈಕಮಾಂಡ್ ಮೊದಲೇ ಮಾಹಿತಿ ನೀಡಿತ್ತು ಎಂದು ರಮೇಶ್ ಜಾರಕಿಹೊಳಿ ತಮ್ಮ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಸಿಡಿ ಸಂಪೂರ್ಣ ನಕಲಿಯಾಗಿದ್ದು, ಇದರ ಹಿಂದೆ ದೊಡ್ಡ ಜಾಲವಿದ್ದು, ಪ್ರಭಾವಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದ.

ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಸಿಡಿ ಬಿಡುಗಡೆಯಾದಾಗಿನಿಂದ ಮುಂಚೂಣಿಯಲ್ಲಿ ನಿಂತು ಅಣ್ಣನ ಪರ ವಕಾಲತ್ತು ವಹಿಸಿದ್ದಾರೆ. ಸಿಡಿ ಬಿಡುಗಡೆಯಾದ ನಂತರ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಂಗ್ರಹಿಸಿರುವ ಮಾಹಿತಿ, ಇದರಲ್ಲಿ ಭಾಗಿಯಾಗಿರುವ ರಾಜಕೀಯ ಪಕ್ಷಗಳ ಪ್ರಭಾವಿಗಳು ಯಾರು? ಈ ರೀತಿ ಮಾಡಲು ಅವರು ಎಷ್ಟು ದಿನಗಳಿಂದ ಕಾರ್ಯತಂತ್ರ ರೂಪಿಸಿದ್ದರು? ಅದಕ್ಕಾಗಿ ವ್ಯಯಿಸಿರುವ ಹಣ ಎಷ್ಟು? ಇದೇ ಸಂದರ್ಭದಲ್ಲಿ ಈ ಸಿಡಿ ಬಿಡುಗಡೆ ಮಾಡಲು ಕಾರಣವೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಬಾಲಚಂದ್ರ ಜಾರಕಿಹೊಳಿ ಹೈಕಮಾಂಡ್ ನಾಯಕರಿಗೆ ವಿವರವಾಗಿ ಒದಗಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಎಸ್‌ಐಟಿ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದರಿಂದ, ಅವರಿಂದಲೂ ಈ ಪ್ರಕಣದ ಹಿಂದಿರುವವರ ಬಗ್ಗೆೆ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆ ಇದ್ದು, ಆ ಬಗ್ಗೆಯೂ ಎಸ್‌ಐಟಿಯಿಂದ ಬರುವ ಮಾಹಿತಿಯನ್ನೂ ಹೈಕಮಾಂಡ್ ನಾಯಕರ ಗಮನಕ್ಕೆೆ ತರಲು ಬಾಲಚಂದ್ರ ಜಾರಕಿಹೊಳಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.