ದೆಹಲಿ ಸ್ಫೋಟದ ಮಹತ್ವದ ಸಂದೇಶ ಟೆಲಿಗ್ರಾಂನಲ್ಲಿ ಲೀಕ್! ಏನಿತ್ತು ಅದರಲ್ಲಿ?ನವದೆಹಲಿ : ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಹೊರಭಾಗದಲ್ಲಿ ಜನವರಿ 29ರಂದು ಸಂಭವಿಸಿದ ಲಘು ಸ್ಫೋಟದ ಹೊಣೆಗಾರಿಕೆ ಹೊತ್ತು ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಹೆಸರಲ್ಲಿ ರವಾನೆಯಾಗಿದ್ದ ಟೆಲಿಗ್ರಾಂ ಸಂದೇಶವು ತಿಹಾರ್ ಕಾರಾಗೃಹದ 8ನೇ ಸಂಖ್ಯೆಯ ಜೈಲಿನ ಒಳಗೆ ಸೃಷ್ಟಿಯಾಗಿತ್ತು ಎನ್ನುವುದು ಬಹಿರಂಗವಾಗಿದೆ.

2013ರ ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಬಂಧಿತನಾಗಿ ಶಿಕ್ಷೆಗೊಳಗಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸದಸ್ಯ ತೆಹ್ಸಿನ್ ಅಖ್ತರ್ ಎಂಬಾತನಿದ್ದ ಜೈಲಿನಿಂದ ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ.

ಇಸ್ರೇಲ್ ಕಚೇರಿ ಮುಂದೆ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ಪೊಲೀಸ್ ವಿಶೇಷ ಘಟಕವು ಇದು ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನ ಎಂದು ಆರಂಭದಲ್ಲಿ ಭಾವಿಸಿತ್ತು. ಏಕೆಂದರೆ ಜೈಶ್ ಉಲ್ ಹಿಂದ್ ಎಂಬ ಸಂಘಟನೆ ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ ತನಿಖೆ ಮುಂದುವರಿಸಿದಾಗ ಇದು ತಿಹಾರ್ ಜೈಲಿನ ಒಳಗಿನಿಂದ ಸೃಷ್ಟಿಯಾದ ಸಂದೇಶ ಎನ್ನುವುದು ಗೊತ್ತಾಗಿದೆ.

ಫೋನ್‌ನಲ್ಲಿ ಪೋಸ್ಟ್ ಮಾಡಲು ಬಳಸಲಾಗಿದ್ದ ಐಪಿ ವಿಳಾಸ ಅಫ್ಘಾನಿಸ್ತಾನದ ಹೆರಟ್ ಎಂದು ತೋರಿಸುತ್ತಿತ್ತು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಮೂಲದ ತಂಡಗಳು ಪ್ರಮೋಟ್ ಮಾಡಿವೆ ಎನ್ನಲಾಗಿತ್ತು. ಆದರೆ ತನಿಖೆ ಮುಂದುವರಿಸಿದಂತೆ ಅದು ತಿಹಾರ್ ಜೈಲಿನಲ್ಲಿ ಸೃಷ್ಟಿಯಾಗಿರುವುದು ತಿಳಿದುಬಂದಿದೆ.

ಮುಕೇಶ್ ಅಂಬಾನಿ ಅವರ ನಿವಾಸದ ಮುಂದೆ ಪತ್ತೆಯಾದ ಸ್ಫೋಟಕದ ಕುರಿತು ಕೂಡ ಜೈಶ್ ಉಲ್ ಹಿಂದ್ ಸಂಘಟನೆ ಕಾರಣ ಎಂಬ ಟೆಲಿಗ್ರಾಂ ಸಂದೇಶ ರವಾನೆಯಾಗಿತ್ತು. ಅದು ತಿಹಾರ್ ಜೈಲಿನ ಒಳಗೆ ಅಥವಾ ಸಮೀಪದಿಂದ ಮಾಡಲಾಗಿದ್ದ ಸಂದೇಶ ಎನ್ನುವುದು ಗುರುವಾರ ತಿಳಿದುಬಂದಿತ್ತು. ಅದರ ಮರುದಿನವೇ ಮತ್ತೊಂದು ಕುತೂಹಲಕಾರಿ ಮಾಹಿತಿ ದೊರಕಿದೆ.

ಜೈಲಿನ ಒಳಗಿನಿಂದ ಮೊಬೈಲ್ ಫೋನ್ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಕೈದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೂರ್ವ ದೆಹಲಿಯ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಈ ಫೋನ್ ನೋಂದಣಿಯಾಗಿದ್ದು, ಕಳೆದ ವರ್ಷದ ಜುಲೈನಲ್ಲಿ ಸಕ್ರಿಯವಾಗಿತ್ತು. ಈಗ ಈ ಎರಡೂ ಘಟನೆಗಳಿಗೆ ನಂಟು ಇದೆಯೇ? ಜೈಲಿನಲ್ಲಿ ಇರುವ ಕೈದಿಗಳಲ್ಲಿ ಯಾರಾದರೂ ಇದಕ್ಕೆ ಸಂಬಂಧಿಸಿದವರೇ? ಜೈಲಿನಲ್ಲಿಯೇ ಉಗ್ರರ ಗುಂಪು ಸಂಘಟಿತವಾಗಿದೆಯೇ? ಮುಂತಾದ ಪ್ರಶ್ನೆಗಳು ಉದ್ಭವವಾಗಿವೆ.