ಸಾಗರದಲ್ಲಿ ಹುಟ್ಟುವ ಪ್ರತಿಯೊಂದು ಚಂಡಮಾರುತಗಳಿಗೆ ಹೆಸರು ಬರುವುದು ಹೇಗೆ ಗೊತ್ತಾ?! ; ಇಲ್ಲಿದೇ ವಿಶೇಷ ಮಾಹಿತಿ.ಇದೀಗ ಚಳಿಗಾಲ ಕಾಲಿಟ್ಟರೂ ಮಳೆಯೇ ಮುಗಿದಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವಾರು ರಾಜ್ಯಗಳು ನಿವಾರ್​ ಎಂಬ ಚಂಡಮಾರುತದ ಸುಳಿಗೆ ಸಿಲುಕಿ ನಲುಗಿಹೋಗಿದ್ದು, ಅದರ ಬೆನ್ನಲ್ಲೇ ಇದೀಗ ಬುರೆವಿ ಎನ್ನುವ ಹೆಸರಿನ ಚಂಡಮಾರುತ ಸೃಷ್ಟಿಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ‘ಫೋನಿ’ ಎಂಬ ಚಂಡಮಾರುತ ಎಷ್ಟೊಂದು ಅನಾಹುತ ಮಾಡಿತ್ತು. ಅದಕ್ಕೂ ಮೊದಲು ‘ತಿತ್ಲಿ’ ಎಂಬ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾವನ್ನು ಹಾಗೂ ‘ಓಖಿ’ ಎಂಬ ಚಂಡಮಾರುತವು ಕೇರಳ ಮತ್ತು ತಮಿಳುನಾಡಿನಲ್ಲಿ ಅಪಾರ ಹಾನಿ ಮಾಡಿತ್ತು. ಕ್ಯಾರ್, ಫೋನಿ, ತಿತ್ಲಿ, ಓಖಿ, ವಾಧ್ರಾ, ಹೆಲೆನ್. ಹೀಗೆ ಚಿತ್ರ-ವಿಚಿತ್ರ, ಅಂದ-ಚೆಂದದ ಹೆಸರುಗಳ ಚಂಡಮಾರುತ ಬಂದು ಅನಾಹುತಗಳನ್ನೇ ಸೃಷ್ಟಿಸಿ ಹೋಗಿವೆ. ಕೆಲವು ಅಲ್ಪ ಪ್ರಮಾಣದಲ್ಲಿ ಹಾನಿಯುಂಟು ಮಾಡಿದ್ದರೆ, ಇನ್ನು ಕೆಲವು ಸಹಸ್ರಾರು ಜೀವಗಳನ್ನೇ ಬಲಿ ಪಡೆದಿವೆ. ಅಷ್ಟಕ್ಕೂ ಈ ಚಂಡಮಾರುತಕ್ಕೆಲ್ಲಾ ಹೆಸರಿಡುವವರು ಯಾರು ಎಂದು ನಿಮಗೆ ಗೊತ್ತೆ? ಇವುಗಳಿಗೆ ಹೆಸರಿಡುವ ಪದ್ಧತಿ ಶತಮಾನಗಳ ಹಿಂದೆಯೇ ಆರಂಭವಾದದ್ದು. ಆರಂಭದಲ್ಲಿ ಯಾವ ದಿನ ಚಂಡಮಾರುತ ಅಪ್ಪಳಿಸಬಹುದು ಎನ್ನುವುದರ ಆಧಾರದ ಮೇಲೆ ಕೆರೆಬಿಯನ್ ದ್ವೀಪದ ನಿವಾಸಿಗಳು ರೋಮನ್ ಕ್ಯಾಥಲಿಕ್ ಕ್ಯಾಲೆಂಡರ್​ನಲ್ಲಿ ಆ ದಿನಕ್ಕೆ ಸೂಕ್ತವಾಗಿ ಯಾವ ಸಂತರ ಹೆಸರಿದೆಯೋ ಅವರ ಹೆಸರನ್ನು ಇಡುತ್ತಿದ್ದರು. ನಂತರ ಕ್ರಮೇಣ ಈ ಹೆಸರನ್ನು ಜಾಗತಿಕ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಇಡಲು ಶುರು ಮಾಡಿತು. ಈ ಸಂಸ್ಥೆಯ ಕೇಂದ್ರ ಸ್ಥಾನ ಇರುವುದು ಜಿನಿವಾ ಮತ್ತು ಸ್ವಿಜರ್ಲೆಂಡ್​ನಲ್ಲಿ.

ಭಾರತ, ಬಾಂಗ್ಲಾ ದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್​ಗಳಲ್ಲಿ ಬೀಸುವ ಚಂಡಮಾರುತದ ಕೇಂದ್ರ ಬಿಂದು ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ ಹಾಗೂ ಅಟ್ಲಾಂಟಿಕ್ ಮಹಾಸಾಗರ. ಈ ಎಲ್ಲಾ ದೇಶಗಳಲ್ಲಿ ಮುನ್ನೆಚ್ಚರಿಕಾ ಕೇಂದ್ರಗಳಿವೆ. ಇವು ಒಂದಿಷ್ಟು ಹೆಸರುಗಳನ್ನು ಆಯ್ಕೆ ಮಾಡಿ ಡಬ್ಲ್ಯುಎಂಒಗೆ ಕಳುಹಿಸುತ್ತವೆ. ಅಲ್ಲಿರುವ ಸದಸ್ಯರ ಪೈಕಿ ಹೆಚ್ಚು ಮಂದಿ ಯಾವ ಹೆಸರನ್ನು ಒಪ್ಪಿಕೊಳ್ಳುತ್ತಾರೆಯೋ ಅದೇ ಹೆಸರು ಅಂತಿಮವಾಗುತ್ತದೆ. ಮುಂದಿನ 10 ವರ್ಷ ಈ ಹೆಸರು ಪುನರಾವರ್ತನೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇಂಗ್ಲಿಷ್ ಅಕ್ಷರ ‘ಎ’ಯಿಂದ ವರ್ಷದ ಮೊದಲ ಚಂಡಮಾರುತಕ್ಕೆ ಹೆಸರು ಆರಂಭಿಸಲಾಗುತ್ತದೆ. ನಂತರದ ಚಂಡಮಾರುತಗಳಿಗೆ ಬಿ, ಸಿ, ಡಿ. ಹೀಗೆ ಆರಂಭವಾಗುವ ಹೆಸರು ಇಡಲಾಗುತ್ತದೆ. ಭಾರತ ಆಯ್ಕೆ ಮಾಡಿರುವ ಹಲವು ಹೆಸರುಗಳ ಪೈಕಿ ಕೆಲವನ್ನು ಈಗಾಗಲೇ ಇಡಲಾಗಿದೆ. ಆಕಾಶ್, ಬಿಜಲಿ, ಜಲ್, ಲೆಹರ್, ಮೇಘ, ಸಾಗರ್ ಮುಂತಾದ ಹೆಸರುಗಳು ಇನ್ನೂ ಬಾಕಿ ಇವೆ.

ಕೆಲವು ಸಲ ಚಂಡಮಾರುತಕ್ಕೂ, ಹೆಸರುಗಳಿಗೂ ಸಂಬಂಧ ಇರುತ್ತದೆ. ಉದಾಹರಣೆಗೆ ಫೋನಿ. ಸಂಸ್ಕೃತದಲ್ಲಿ ಫಣಿ ಎಂದರೆ ಹಾವಿನ ಹೆಡೆ. ಈ ಚಂಡಮಾರುತ ಹಾವಿನ ಹೆಡೆಯಂತೆ ತೋರುವ ಕಾರಣ ಫಣಿ ಬಾಂಗ್ಲಾದ ಬಾಯಲ್ಲಿ ಫೋನಿ ಆಯಿತು. ವರ್ಧಾ ಎಂದರೆ ಕೆಂಪು ಗುಲಾಬಿ. ಭಾರಿ ಅನಾಹುತ ಸೃಷ್ಟಿಸಿ ಸಾವುನೋವುಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಪಾಕಿಸ್ತಾನವು ಒಮ್ಮೆ ವರ್ಧಾ ಎಂಬ ಹೆಸರು ಸೂಚಿಸಿತ್ತು. ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ಜೋರಾಗಿ ಪ್ರದಕ್ಷಿಣೆ ಇಲ್ಲವೇ ಅಪ್ರದಕ್ಷಿಣಾ (ಕ್ಲಾಕ್ ಆಂಡ್ ಆಂಟಿಕ್ಲಾಕ್​ವೈಸ್) ಪಥದಲ್ಲಿ ಸುರುಳಿ ಸುತ್ತುತ್ತಾ ಕಡಿಮೆ ಒತ್ತಡ ಇರುವ ಪ್ರದೇಶದತ್ತ ಮುನ್ನುಗ್ಗುವುದೇ ಚಂಡಮಾರುತ. ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರಾಕಾರದಲ್ಲಿ ಬಿರುಗಾಳಿ ಉಂಟಾಗುತ್ತದೆ. ಭೂಮಿ ತಿರುಗುವ ದಿಕ್ಕಿನಲ್ಲಿಯೇ ಇದು ಸುತ್ತುತ್ತದೆ. ಇದಕ್ಕೆ ಸೈಕ್ಲೋನ್, ಹರಿಕೇನ್, ಟೈಫೂನ್ ಎಂಬೆಲ್ಲಾ ಹೆಸರುಗಳಿವೆ. ಪೆಸಿಫಿಕ್ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನು ಟೈಫೂನ್ ಎಂದೂ, ಹಿಂದೂ ಮಹಾಸಾಗರದ ಚಂಡಮಾರುತವನ್ನು ಸೈಕ್ಲೋನ್ ಎಂದೂ, ಅಟ್ಲಾಂಟಿಕ್ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನು ಹರಿಕೇನ್ ಎಂದೂ ಕರೆಯುತ್ತಾರೆ. ಸಮುದ್ರ ಇರುವ ಸ್ಥಳಗಳಲ್ಲಿ ಅಂದರೆ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಿರುತ್ತದೆ. ನಾಡಿನತ್ತ ಬಂದಂತೆಲ್ಲಾ ಚಂಡಮಾರುತದ ತೀವ್ರತೆ ಕಡಿಮೆಯಾದರೂ ಚಂಡಮಾರುತದ ಪ್ರಭಾವ ಕಾಣಿಸಿಕೊಂಡು ಭಾರಿ ಮಳೆಯಾಗುತ್ತದೆ.

ಚಂಡಮಾರುತಕ್ಕೆ ಮೊದಲೆಲ್ಲಾ ಹೆಚ್ಚಾಗಿ ಹೆಣ್ಣುಮಕ್ಕಳ ಹೆಸರನ್ನೇ ಇಡಲಾಗುತ್ತಿತ್ತು. ಇಂಗ್ಲಿಷ್ ಅಕ್ಷರಗಳ ಆಧಾರದಲ್ಲಿ ಇವುಗಳಿಗೆ ಹೆಸರಿಸುವ ಪದ್ಧತಿ ಮೊದಲ ಬಾರಿಗೆ ಆರಂಭವಾಗಿದ್ದು 1953ರಲ್ಲಿ. ಅಮೆರಿಕ ಇದನ್ನು ಆರಂಭಿಸಿತ್ತು. ಕೇವಲ ಮಹಿಳೆಯರ ಹೆಸರನ್ನೇ ಇಡುತ್ತಿದ್ದ ಕಾರಣ, ಮಹಿಳಾ ಸಂಘಟನೆಯಿಂದ ಭಾರಿ ಪ್ರತಿಭಟನೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ 1978ರಿಂದ ಪುರುಷರ ಹೆಸರನ್ನು ಇಡಲು ಶುರು ಮಾಡಿದರೂ ಹೆಣ್ಣುಮಕ್ಕಳ ಹೆಸರಿಗೇ ಪ್ರಾಧಾನ್ಯ. ಚಂಡಮಾರುತ ಒಂದಿಲ್ಲೊಂದು ಪ್ರದೇಶಗಳಲ್ಲಿ ಮೇಲಿಂದ ಮೇಲೆ ಬೀಸುತ್ತಲೇ ಇರುತ್ತದೆ. ಅವುಗಳಿಗೆ ಹೆಸರು ಇಟ್ಟರೆ ಗುರುತಿಸಲು ಸುಲಭವಾಗುತ್ತದೆ ಮಾತ್ರವಲ್ಲದೇ ಅದರಿಂದ ಆಗಿರುವ ಹಾನಿ, ಪರಿಹಾರಗಳ ಲೆಕ್ಕಾಚಾರ ಹಾಕಲೂ ಅನುಕೂಲ ಆಗುತ್ತದೆ. ಹೆಸರು ನೆನಪಿಡಲು ಹಾಗೂ ಉಚ್ಛರಿಸಲು ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಇಂಗ್ಲಿಷ್ನ ಕ್ಯೂ, ಯು, ಎಕ್ಸ್ , ವೈ ಮತ್ತು ಝುಡ್ ಅಕ್ಷರಗಳನ್ನು ಬಿಟ್ಟು ಉಳಿದಿರುವ 21 ಅಕ್ಷರಗಳಿಂದ ಆರಂಭವಾಗುವ ಹೆಸರು ಇಡಲಾಗುತ್ತದೆ. ಯಾವುದೇ ಚಂಡಮಾರುತ ಭಾರಿ ಪ್ರಮಾಣ ಜೀವಹಾನಿ, ಅಪಾರ ನಷ್ಟ ಉಂಟು ಮಾಡಿದರೆ ಆ ಹೆಸರನ್ನು ಪುನಃ ಇಡುವುದಿಲ್ಲ. ಇದು ಚಂಡಮಾರುತಕ್ಕೆ ತುತ್ತಾಗಿ ಮೃತರಾಗುವವರಿಗೆ ನೀಡುವ ಗೌರವವಂತೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/