ಬ್ರೇಕಿಂಗ್ : ಕಂಗನಾ ರಣಾವತ್ ವಿರುದ್ಧ ಹೊರಡಿತು ವಾರೆಂಟ್!ಮುಂಬೈ: ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಕಂಗನಾ ರನೌತ್ ವಿರುದ್ಧ ಮುಂಬೈನ ನ್ಯಾಯಾಲಯವೊಂದು ಸೋಮವಾರದಂದು ವಾರೆಂಟ್ ಹೊರಡಿಸಿದೆ. ಹಿರಿಯ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ಅವರು ಕಂಗನಾ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತ್ ಮುಂಬೈನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ವಿಚಾರಣೆಗೆ ಕಂಗನಾ ಅವರು ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ಸಹಿತ ವಾರೆಂಟ್‌ ಹೊರಡಿಸಲಾಗಿದೆ. ಕಂಗನಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕು ಎಂದು ಅಖ್ತರ್ ಪರ ವಕೀಲೆ ವೃಂದಾ ಗ್ರೋವರ್ ಅವರು ವಾದಿಸಿದರು. ಆದರೆ, ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಅವರು ಸಮನ್ಸ್ ಜಾರಿ ಮಾಡಿರುವುದೆ ಕಾನೂನು ರೀತಿ ಸಮರ್ಪಕವಾಗಿಲ್ಲ ಎಂದು ಪ್ರತಿ ವಾದ ಮಾಡಿದರು. ಮ್ಯಾಜಿಸ್ಟ್ರೇಟ್ ಆರ್ ಆರ್ ಖಾನ್ ಅವರು ಕಾನೂನು ಪ್ರಕ್ರಿಯೆ ಸರಿಯಿಲ್ಲವೆಂದರೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿ ವಾರೆಂಟ್ ಜಾರಿಗೊಳಿಸಿದರು.

ಏನಿದು ವಿವಾದ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ಆರೋಪಿಸಿದ್ದು, ಈ ಕುರಿತಂತೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ದೂರು ದಾಖಲಿಸಿದ್ದರು.

ಈ ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆಗೆ ಫೆಬ್ರವರಿ 1ರಂದು ಹಾಜರಾಗುವಂತೆ ಕಂಗನಾಗೆ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ನೀಡಿತ್ತು. ಆದರೆ, ಕಂಗನಾ ಕೋರ್ಟಿಗೆ ಹಾಜರಾಗಿರಲಿಲ್ಲ. ಸೋಮವಾರವೂ ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಜಾಮೀನು ಸಹಿತ ವಾರೆಂಟ್‌ ಹೊರಡಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.