ಇಂದಿರಾ ಕ್ಯಾಂಟೀನ್ ಬಳಿ ಹಸುವಿಗೆ ಅಪಾಯ ; ರಕ್ಷಿಸಿದ ಸಾರ್ವಜನಿಕರುಮಡಿಕೇರಿ: ನಗರದ ಇಂದಿರಾ ಕ್ಯಾಂಟೀನ್ ಬಳಿಯ ಚರಂಡಿಗೆ ಬಿದ್ದು ಅಪಾಯದಲ್ಲಿ ಸಿಲುಕಿದ್ದ ಹಸುವನ್ನು ಸಾರ್ವಜನಿಕರು ರಕ್ಷಣೆ ಮಾಡಿ ಮಾನವೀಯತೆ ತೋರಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ಹೊಸದಾಗಿ ಚರಂಡಿ ನಿರ್ಮಿಸಲಾಗಿತ್ತು. ಆದರೆ ಅದರ ಮೇಲೆ ಸ್ಲ್ಯಾಬ್ ನಿರ್ಮಿಸದೇ ಬಿಟ್ಟಿದ್ದರ ಪರಿಣಾಮವಾಗಿ ಪಕ್ಕದಲ್ಲಿದ್ದ ಹಸಿರು ಮೇಯಲು ಬಂದಿದ್ದ ಹಸು ಚರಂಡಿಗೆ ಬಿದ್ದಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಗಮನಿಸಿದ ಸ್ಥಳೀಯ ಆಟೋ ಚಾಲಕರು ಹಾಗೂ ಪತ್ರಕರ್ತರು ಸುಮಾರು ಅರ್ಧ ಗಂಟೆ ಸಾಹಸ ಮಾಡಿ, ಹಸುವನ್ನು ಮೇಲಕ್ಕೆ ಎತ್ತಿದ್ದಾರೆ.

ರಾಷ್ಟ್ರಪತಿಯವರು ಬರುವ ಸಮಯದಲ್ಲಿ ಅಧಿಕಾರಿಗಳು ಇಲ್ಲಿ ನಿಂತು ತರಾತುರಿಯಲ್ಲಿ ಕೆಲಸ ಮಾಡಿದ್ದರು. ಚರಂಡಿಯ ಮೇಲ್ಭಾಗ ಮುಚ್ಚದಿದ್ದರೆ ರಾತ್ರಿ ಸಮಯದಲ್ಲಿ ಮನುಷ್ಯರು ಕೂಡ ಈ ಚರಂಡಿಯಲ್ಲಿ ಬೀಳುತ್ತಾರೆ. ಅದಕ್ಕಿಂತ ಮುಂಚೆ ಚರಂಡಿಯ ಮೇಲ್ಭಾಗವನ್ನು ಮುಚ್ಚಲು ಕ್ರಮ ಗೊಳ್ಳಬೇಕು. ರಾಷ್ಟ್ರಪತಿ ಬಂದು ಹೋದ ನಂತರ ಯಾರೂ ಈ ಕೂಡ ತಿರುಗಿ ನೋಡಲಿಲ್ಲ. ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದಿದ್ದರೆ, ಈ ರೀತಿಯ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿಯ ಮೇಲ್ಭಾಗ ತಕ್ಷಣವೇ ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿಸುತ್ತಿದ್ದಾರೆ.