ಭಾರತಕ್ಕೆ ಬರಲಿದ್ದಾರೆ ಆರೋಪಿ ನೀರವ್ ಮೋದಿ!ಪಂಜಾಬ್: ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸುಮಾರು 14,000 ಕೋಟಿ ಹಣವನ್ನು ಸಾಲವನ್ನಾಗಿ ಪಡೆದು, ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಜ್ರ ವ್ಯಾಪಾರಿ, ಆರ್ಥಿಕ ಅಪರಾಧಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೆಂಡ್ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿತ್ತು. ಈ ಬೆನ್ನಲ್ಲೇ ನೀರವ್ ಮೋದಿಗಾಗಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ವಿಶೇಷ ಕೊಠಡಿ ಸಜ್ಜುಗೊಳಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿಯನ್ನು ಮುಂಬೈಗೆ ಕರೆತಂದ ಬಳಿಕ ಅತೀ ಹೆಚ್ಚು ಭದ್ರತೆ ಹೊಂದಿರುವ ಬರಾಕ್ ಸಂಖ್ಯೆ 12ರ ಮೂರು ಕೊಠಡಿಗಳಲ್ಲಿ ಒಂದರಲ್ಲಿ ಇರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿಯನ್ನು ಇರಿಸುವ ಸಿದ್ಧತೆಗಳು ಪೂರ್ಣಗೊಂಡಿವೆ. ಮತ್ತು ಅವರನ್ನು ಇರಿಸುವ ಕೊಠಡಿಯನ್ನು ಸಜ್ಜುಗೊಳಿಸಲಾಗಿದೆ. ಯಾವಾಗ ಬೇಕಾದರೂ ಅವರನ್ನು ಭಾರತಕ್ಕೆ ಹಸ್ತಾಂತರವಾಗಬಹುದು ಎಂದು ಹೇಳಿದ್ದಾರೆ.

ಭಾರತದ ಬ್ಯಾಂಕ್ಗಳಿಗೆ ಬಹುಕೋಟಿ ವಂಚನೆ ಎಸಗಿದ್ದ ನೀರವ್ ಮೋದಿ ಹಣವನ್ನು ಪಾವತಿಸದೆ ಇಂಗ್ಲೆಂಡ್ ಪಲಾಯನ ಮಾಡಿದ್ದರು. ಹೀಗಾಗಿ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರ ಇಂಗ್ಲೆಂಡ್ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ “ಸಾಂಕ್ರಾಮಿಕ ರೋಗ ಮತ್ತು ಭಾರತೀಯ ಜೈಲು ಪರಿಸ್ಥಿತಿಗಳಲ್ಲಿ ಅವರ ಮಾನಸಿಕ ಆರೋಗ್ಯವು ಹದಗೆಡುತ್ತದೆ” ಎಂಬ ಆರೋಪಿಯ ವಾದಗಳನ್ನು ತಳ್ಳಿಹಾಕಿದೆ. ಅಲ್ಲದೆ, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸ್ಯಾಮ್ಯುವೆಲ್ ಗೂಝೀ, “ಮಾನವ ಹಕ್ಕುಗಳ ಅನುಸಾರವಾಗಿ ಭಾರತದ ಆರ್ಥಿಕ ಅಪರಾಧಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ನನಗೆ ತೃಪ್ತಿ ನೀಡಿದೆ. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಸಹ ಆರೋಪಿಗೆ ಅವಕಾಶ ಇದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತದಲ್ಲಿ ನೀರವ್ ಮೋದಿ ವಿರುದ್ಧ ಪ್ರಬಲವಾದ ಪ್ರಕರಣಗಳು ಇವೆ. ನೀರವ್ ಮೋದಿ ನ್ಯಾಯಸಮ್ಮತ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ನಾನು ಒಪ್ಪುವುದಿಲ್ಲ. ಈ ವ್ಯವಹಾರಗಳಲ್ಲಿ ಅಪ್ರಾಮಾಣಿಕತೆಯ ಪ್ರಕ್ರಿಯೆ ಇದೆ. ಹೀಗಾಗಿ ಈ ಪ್ರಕರಣಗಳ ಕುರಿತು ವಿಚಾರಣೆಯನ್ನು ಅವರು ಎದುರಿಸಲೇಬೇಕು” ಎಂದು ಹೇಳಿದ್ದರು.