ಶಿವಮೊಗ್ಗ ಘಟನೆ ನಂತರ ಮತ್ತೊಂದು ಭೀಕರ ಸ್ಫೋಟ! ಸಾವುಚಿಕ್ಕಬಳ್ಳಾಪುರ: ಶಿವಮೊಗ್ಗ ಗಣಿ ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೊಂದು ಗಣಿ ಸ್ಪೋಟ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಬಳಿಯ ಭ್ರಮರವಾಸಿನಿ ಕ್ರಷರ್ ನಿಂದ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಐದು ಮಂದಿ ಮೃತಪಟ್ಟಿದ್ದು, ಒರ್ವ ಗಾಯಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಅಪರೇಟರ್ ಆದ ಗಂಗಾಧರ್, ವೇಯರ್ ಆದ ಮುರುಳಿ ಹಾಗೂ ವಾಚ್ ಮೆನ್ ಮಹೇಶ್ ಸೇರಿದಂತೆ ಸ್ಥಳೀಯ ರಾಮು ಎಂಬಾತ ಮೃತಪಟ್ಟಿದ್ದಾರೆ. ಟಾಟಾ ಏಸ್ ಚಾಲಕ ರಿಯಾಜ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಭ್ರಮರವಾಸಿನಿ ಕ್ರಷರ್ ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತು ತರಲು ಮುಂದಾಗಿದ್ದಾರೆ.

ಈ ವೇಳೆ ಬೈಕ್‍ನಲ್ಲಿ ಮುಂದೆ ಸಾಗಿದರೆ ಹಿಂದೆ ಟಾಟಾ ಏಸ್ ವಾಹನ ಸಾಗಿದೆ. ಕೊನೆಗೆ ಅರಣ್ಯ ಪ್ರದೇಶದಲ್ಲಿ ಅಡಗಿಸಿದ್ದ ಸ್ಫೋಟಕಗಳನ್ನ ಹೊತ್ತು ತರುವ ವೇಳೆ ಏಕಾಏಕಿ ಬ್ಲಾಸ್ಟ್ ಆಗಿದ್ದು, ಪರಿಣಾಮ ಐದು ಮಂದಿಯ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಛಿಧ್ರ ಛಿದ್ರವಾಗಿ ಮೃತದೇಹಗಳೆಲ್ಲಾ ನೂರಾರು ಮೀಟರ್ ಚೆಲ್ಲಾಪಿಲ್ಲಿಗಳಾಗಿವೆ. ಇನ್ನೂ ಭ್ರಮರವಾಸಿನಿ ಕ್ರಷರ್ ನ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು ಹಾಗೂ ಆಂಧ್ರಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಅಂತ ತಿಳಿದುಬಂದಿದೆ.

ಕಳೆದ ವಾರ ಈ ಕ್ರಷರ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಲಾಗಿದೆ. ಹೀಗಾಗಿ ಪೊಲೀಸರು ಕಣ್ತಪ್ಪಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನ ಬಿಸಾಡಲು ಹೋದಾಗ ಘಟನೆ ನಡೆದಿರಬಹುದು ಅಂತ ಅಂದಾಜಿಸಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಡಿ ಸಿ ಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃಪೆ: ಪಬ್ಲಿಕ್ ಟಿವಿ