ಕ್ರಿಕೆಟ್ ಅಭಿಮಾನಿಗಳಿಗೆ ಯೂಸುಫ್ ಪವಾಣ್ ನೀಡಿದರು ಆಘಾತ!ನವದೆಹಲಿ: ಭಾರತ ತಂಡದ ಮಾಜಿ ಆಲ್‍ರೌಂಡರ್ ಆಟಗಾರ ಯೂಸುಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯೂಸುಫ್ ಪಠಾಣ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮತ್ತು ಸ್ಪಿನ್ ಕೈಚಳಕದಿಂದ ಎಲ್ಲರ ಗಮನಸೆಳೆದಿದ್ದರು.

ಯೂಸುಫ್ ಪಠಾಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿದಾಯ ಪತ್ರವನ್ನು ಹಾಕಿದ್ದು, ನಾನು ನನ್ನ ನನ್ನ ಜೀವನದ ಕ್ರಿಕೆಟ್ ಇನ್ನಿಂಗ್ಸ್‍ಗೆ ಪೂರ್ಣ ವಿರಾಮ ಹಾಕುವ ಕಾಲ ಬಂದಿದೆ. ಇಂದಿನಿಂದ ನಾನು ಎಲ್ಲಾ ಪ್ರಕಾರದ ಕ್ರಿಕೆಟ್‍ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಕ್ರಿಕೆಟ್ ಜೀವನದಲ್ಲಿ ಜೊತೆಯಾದ ಸ್ನೇಹಿತರು, ಸಹ ಆಟಗಾರರು, ಕುಟುಂಬ ವರ್ಗ, ಅಭಿಮಾನಿಗಳು, ಹಲವು ತಂಡಗಳು, ತರಬೇತುದಾರರು ಹಾಗೂ ನನ್ನ ಎಲ್ಲಾ ದೇಶವಾಸಿಗಳು ನನಗೆ ಬೆಂಬಲ ಸೂಚಿಸಿರುವುದಕ್ಕಾಗಿ ಧನ್ಯವಾದ. ನಾನು 2011 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದಾಗ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲಲ್ಲಿ ಹೊತ್ತು ಸಾಗಿರುವುದು ನನಗೆ ಮರೆಯಲಾಗದ ಕ್ಷಣ ಎಂದು ನೆನಪಿಸಿಕೊಂಡಿದ್ದಾರೆ.

ಯೂಸುಫ್ ಭಾರತದ ಪರ 57 ಏಕದಿನ ಪಂದ್ಯ ಆಡಿ 810 ರನ್ ಮತ್ತು 22 ಟಿ20 ಪಂದ್ಯವನ್ನು ಆಡಿ 236 ರನ್ ಸಿಡಿಸಿದ್ದಾರೆ. ಎಡಗೈ ಸ್ಪೋಟಕ ಬ್ಯಾಟಿಂಗ್‍ನೊಂದಿಗೆ ಬೌಲಿಂಗ್‍ನಲ್ಲೂ ಭಾರತಕ್ಕೆ ನೆರವಾಗುತ್ತಿದ್ದ ಯೂಸುಫ್ ಒಟ್ಟು 46 ವಿಕೆಟ್ ಪಡೆದು ಮಿಂಚಿದ್ದಾರೆ.

ಯೂಸುಫ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 100 ಪಂದ್ಯಗಳಿಂದ 4825 ರನ್ ಮತ್ತು 201 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ 2008ರಲ್ಲಿ ರಾಜಸ್ಥಾನ್ ರಾಯಲ್ಸ್, ಮತ್ತು 2012 ಮತ್ತು 2014ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿ ತಂಡ ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.