ಬೇರೆಲ್ಲಾ ಪಕ್ಷ ಬಿಟ್ಟು ಬಿಜೆಪಿಗೆ ಯಾಕೆ ಸೇರಿದ್ರಿ ಎಂಬ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಅಣ್ಣಾಮಲೈ! ವೀಡಿಯೋ ನೋಡಿನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಸದಸ್ಯತ್ವ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಕೋರಿದರು.

ಈ ವೇಳೆ ಮಾತನಾಡಿದ ಅಣ್ಣಾಮಲೈ ಅವರು, ನಾನು ಸಾಮಾನ್ಯ ಕಾರ್ಯಕರ್ತನಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗಿಂತ ಮುನ್ನ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದು, ನಾನು ಪಕ್ಷದಲ್ಲಿ ಏನನ್ನು ನಿರೀಕ್ಷೆ ಮಾಡದೆ ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ್ ಅವರಿಗೆ, ರಾಜ್ಯಾಧ್ಯಕ್ಷರಾದ ಮುರುಗನ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಐತಿಹಾಸಿಕ ಹಿನ್ನೆಲೆಯುಳ್ಳ ನೆಲದಿಂದ ಬಂದಿದ್ದೇನೆ. ನನ್ನ ನೆಲದ ತಿರುವಳ್ಳವರ್ ಬರೆದ ತಿರುಕ್ಕುರಳ್ ಕೃತಿ ರಾಜ ಹಾಗೂ ಆಡಳಿತಗಾರನಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ನನ್ನ ನೆಲ ಜ್ಞಾನ, ಸ್ಫೂರ್ತಿ, ಧೈರ್ಯ ಹಾಗೂ ಭಯವಿಲ್ಲದೇ ಕಾರ್ಯನಿರ್ವಹಿಸುವ ಬಗ್ಗೆ ಹೇಳುತ್ತದೆ. ಈ ಎಲ್ಲಾ ಗುಣಗಳನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರಲ್ಲಿ ನೋಡಿದ್ದೇನೆ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕು. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು. ಸಮಾಜಸೇವೆ ಮಾಡುವುದಕ್ಕೆ ಬಿಜೆಪಿಗೆ ಸೇರಿದ್ದೇನೆ. ಪೊಲೀಸ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ಧರ್ಮ ನನ್ನದಾಗಿತ್ತು. ಎಲ್ಲಾ ಧರ್ಮದವರೂ ನನಗೆ ಸ್ನೇಹಿತರು ಇದ್ದಾರೆ. ಬಿಜೆಪಿ ಸೇರಿದ ಮೇಲೆ ಬಿಜೆಪಿ ಸಿದ್ಧಾಂತಕ್ಕೆ ಬದ್ಧನಾಗಿದ್ದು, ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮುರುಳೀಧರ್ ರಾವ್, ಅಣ್ಣಾಮಲೈ ಅವರು ಬಿಜೆಪಿಗೆ ಸೇರ್ಪಡೆಯಾಗುವುದಕ್ಕೆ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅಣ್ಣಾಮಲೈ ಸೇರ್ಪಡೆಯಿಂದ ಬಿಜೆಪಿಗೆ ತಮಿಳುನಾಡುನಲ್ಲಿ ಶಕ್ತಿ ಬಂದಿದೆ. ಬಿಜೆಪಿಗೆ ಸಾಕಷ್ಟು ಜನರು ಬರುತ್ತಿದ್ದಾರೆ. ಪಕ್ಷ ಇಡೀ ದೇಶದಲ್ಲಿ ಹೆಚ್ಚು ಮನ್ನಣೆ ಗಳಿಸಿದೆ. ದಕ್ಷಿಣ ಭಾರತದಲ್ಲೂ ಬಿಜೆಪಿಗೆ ಜನಮನ್ನಣೆ ಸಿಗುತ್ತಿದ್ದು, ಹಲವು ವಲಯದ ಪ್ರಮುಖ ನಾಯಕರು ಬಿಜೆಪಿ ಸೆರ್ಪಡೆಗೊಳ್ಳುತ್ತಿದ್ದಾರೆ. ಅಣ್ಣಾಮಲೈ ಅವರು ಐಪಿಎಸ್ ಆಗಿ ಕರ್ನಾಟದಲ್ಲಿ ಸೇವೆ ಸಲ್ಲಿಸಿದ್ದು, 9 ವರ್ಷದ ಸೇವೆ ಬಳಿಕ ರಾಜೀನಾಮೆ ನೀಡಿದ್ದಾರೆ. ಜನ ಸೇವೆ ಮುಖ್ಯ ಅಂತಾ ಈಗ ರಾಜಕೀಯ ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.