ಅರುಣ್ ಸಿಂಗ್ ಮುಂದೆ ಬೆಲ್ಲದ್ ಹೇಳಿದ್ದೇನು?ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಆರುವ ಲಕ್ಷಣ ಕಾಣಿಸುತ್ತಿಲ್ಲ. ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿರುವ ಬಿಎಸ್‍ವೈ ವಿರೋಧಿ ಬಣದ ಶಾಸಕ ಅರವಿಂದ್ ಬೆಲ್ಲದ್ ಕೊನೆಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‍ರನ್ನು ಭೇಟಿ ಮಾಡಿ ಅರ್ಧಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ್ದಾರೆ.

ಇದೇ ವೇಳೆ, ಅಮಿತ್ ಶಾ, ಜೆಪಿ ನಡ್ಡಾ ಭೇಟಿಗೂ ಬೆಲ್ಲದ್ ಪ್ರಯತ್ನ ನಡೆಸಿದ್ದಾರೆ. ಈ ಬೆನ್ನಲ್ಲೇ ಬುಧವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಚಿವರ ಸಭೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕಾ? ಬೇಡ್ವಾ ಎಂದು ಸಂಧಿಗ್ಧತೆಯಲ್ಲಿ ಅರುಣ್ ಸಿಂಗ್ ಸಿಲುಕಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಜೊತೆಗೆ ವೀಕ್ಷಕರೊಬ್ಬರನ್ನು ಕಳಿಸಿ ಎಂದು ಬಿಎಸ್‍ವೈ ವಿರೋಧಿ ಬಣ ಹೈಕಮಾಂಡ್‍ಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಬಣದ ಚಿಂತೆಗೆ ಕಾರಣವಾಗಿದೆ.

ಈ ಮಧ್ಯೆ ಅರವಿಂದ್ ಬೆಲ್ಲದ್ ವಿರುದ್ಧ ಎಂಎಲ್‍ಸಿ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಅರವಿಂದ್ ಬೆಲ್ಲದ್ ಎಂಬ ಮನುಷ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ತಾವೇ ಗೆದ್ದು ಬರಲು ತಿಣುಕಾಡುವ ಮನುಷ್ಯ ಆತ. ಅವರು ಸಿಎಂ ಕನಸು ಕಾಣಲಿ ಯಾರು ಬೇಡ ಅಂತಾರೆ ಎಂದು ಆಯನೂರು ಮಂಜುನಾಥ್ ವ್ಯಂಗ್ಯ ಮಾಡಿದ್ದಾರೆ. ಇನ್ನು ವಿಜಯಪರದ ಶಾಸಕ ಯತ್ನಾಳ್ ಶಾಸಕರಿಗೆ ಕರೆ ಮಾಡಿ ನಾನೇ ಮುಂದಿನ ಸಿಎಂ, ಸಹಕಾರ ಕೊಡಿ ಎಂದು ಕೇಳ್ತಿದ್ದಾರೆ ಅಂತಾ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಅರುಣ್ ಸಿಂಗ್ ಬಳಿ ಬೆಲ್ಲದ್ ಹೇಳಿದ್ದೇನು?
ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಮಾಡಿ. ಹೊಸ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಸಜ್ಜಾಗಲು ಅವಕಾಶ ನೀಡಿ. ಶಾಸಕಾಂಗ ಸಭೆ ಕರೆಯಿರಿ. ಅಭಿಪ್ರಾಯ ಸಂಗ್ರಹಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಬಹಳಷ್ಟು ಶಾಸಕರಿಗೆ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಇದೆ. ವಿಜಯೇಂದ್ರ ಹಸ್ತಕ್ಷೇಪ ಪಕ್ಷದ ಶಾಸಕರ ಕೆಲಸ ಆಗುತ್ತಿಲ್ಲ. ಕೊರೊನಾದಲ್ಲಿ ಎಲ್ಲವನ್ನೂ ಮುಂದೂಡೋದು ಸರಿಯಲ್ಲ.