ಶಾಸಕ ಅರವಿಂದ್ ಬೆಲದ ದೆಹಲಿ ಭೇಟಿ ಸಂಚಲನಖಾಸಗಿ ಕಾರ್ಯಕ್ರಮಕ್ಕಾಗಿ ತೆರಳಿದ್ದೇನೆ ಎಂದು ಹೇಳಿದ ಧಾರವಾಡ ಶಾಸಕ
ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆ ನಡೆಸುವುದಾಗಲಿ ಅಥವಾ ಹೇಳಿಕೆಗಳನ್ನು ನೀಡುವುದಾಗಲಿ ಮಾಡದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ ಬಳಿಕವೂ ಆಡಳಿತಾರೂಢ ಬಿಜೆಪಿಯ ಭಿನ್ನರ ಗುಂಪಿನಲ್ಲಿ ಗುರುತಿಸಿ ಕೊಂಡಿರುವ ಶಾಸಕ ಅರವಿಂದ್ ಬೆಲ್ಲದ ಅವರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಬೆಲ್ಲದ ಅವರು ಇತ್ತೀಚಿನ ಕೆಲವು ತಿಂಗಳುಗಳಿಂದ ಪದೇ ಪದೇ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ .

ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ವರಿಷ್ಠರಿಗೆ ದೂರು ನೀಡುತ್ತಿರುವ ಹಾಗೂ ಅಪಸ್ವರ ಎತ್ತಿರುವ ಶಾಸಕರ ಪೈಕಿ ಬೆಲ್ಲದ ಅವರೂ ಅಗ್ರಗಣ್ಯರು ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಬಲವಾಗಿ ಕೇಳಿಬಂದಿದೆ. ಮುಂದಿನ ವಾರ ಪಕ್ಷದ ರಾಜ್ಯ ಉಸ್ತುವಾರಿ ಆರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಪಕ್ಷದ ಶಾಸಕರು ಹಾಗೂ ಮುಖಂಡರ ಅಹವಾಲು ಆಲಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ ಮೇಲೂ ಬೆಲ್ಲದ ಅವರು ದೆಹಲಿಗೆ ಹೋಗಿದ್ದರ ಹಿಂದಿನ ಮರ್ಮ ಏನು ಎಂಬುದು ಸ್ಪಷ್ಟವಾಗುತ್ತಿಲ್ಲ,

ಖಾಸಗಿ ಭೇಟಿ – ಬೆಲ್ಲದ ಸ್ಪಷ್ಟನೆ : ಈ ನಡುವೆ ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ವತಃ ಅರವಿಂದ್ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.