ಘರ್ಜಿಸಿದ ಯಡಿಯೂರಪ್ಪರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಯಡಿಯೂರಪ್ಪ ಅವರೇ ಇನ್ನೂ ಎರಡುವರ್ಷ ಸಿಎಂ ಎಂದು ಹೇಳಿದನಂತರವೂ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಆ ಚರ್ಚೆಯೇ ಅಪ್ರಸ್ತುತವಾಗಿದೆ. ಇನ್ನೂ ಎರಡು ವರ್ಷ ನಾನೇ ಸಿಎಂ ‘ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಿ ಹೇಳಿದ್ದಾರೆ. ಇದೇ ವೇಳೆ, ಅರುಣ್ ಸಿಂಗ್ ಅವರ ಹೇಳಿಕೆಯಿಂದ ನನಗೆ ಆನೆ ಬಲ ಬಂದಂತಾಗಿದ್ದು, ಕೇಂದ್ರ ನಾಯಕರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ಉತ್ಸಾಹದಲ್ಲಿ ಕಾರ್ಯನಿರ್ವಹಿಸುತ್ತೇನೆ ತಿಳಿಸಿದ್ದಾರೆ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದಕ್ಕಾಗಿಯೇ ನನ್ನನ್ನೇ ಪೂರ್ಣಾವಧಿಯ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ ಎಂದರು. ನಾನೇ ಮುಂದಿನ ಎರಡು ವರ್ಷಗಳ ಸಿಎಂ ಎಂದು ಅವರೇ ಸ್ಪಷ್ಟಪಡಿಸಿರುವುದರಿಂದ ನನಗೆ ಆನೆ ಬಲ ಬಂದಂತಾಗಿದೆ. ಈ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಉತ್ಸಾಹದಿಂದ ಕೆಲಸ ಮಾಡುತ್ತೇನೆ.

ಕೋವಿಡ್ ಹೆಚ್ಚಿರುವ ರಾಜ್ಯದ ಎಂಟು ಜಿಲ್ಲೆಗಳಿಗೆ ಪ್ರವಾಸ ಹಮ್ಮಿಕೊಂಡಿದ್ದೇನೆ. ಮೊದಲಿಗೆ ಹಾಸನಕ್ಕೆ ಬಂದಿದ್ದೇನೆ. ನಂತರ ಚಿಕ್ಕಮಗಳೂರಿಗೆ ತೆರಳುವೆ. ನಾಳೆ ಶಿವಮೊಗ್ಗದಲ್ಲಿ ಪ್ರಗತಿ ಪರಿಶೀಲಿಸುವೆ ಎಂದು ತಿಳಿಸಿದರು. ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ. ಅವರು ಈ ರಾಜ್ಯದ ಬಿಜೆಪಿ ಉಸ್ತುವಾರಿಗಳು. ಹಾಗಾಗಿ ಅವರು ಆಗಾಗ್ಗೆ ರಾಜ್ಯಕ್ಕೆ ಬರುತ್ತಾರೆ, ಹೋಗುತ್ತಾರೆ ಎಂದು ತಿಳಿಸಿದರು.