ಸಿಎಂ ಬದಲಾವಣೆ ವಿಚಾರ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ: ಶೆಟ್ಟರ್ಹುಬ್ಬಳ್ಳಿ: ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಸಿಎಂ ಬದಲಾಣೆ ಇಲ್ಲವೆಂದು ಸಚಿವರು ಮತ್ತು ಹೈಕಮಾಂಡ್ ಸ್ಪಷ್ಟನೆ ನೀಡಿದೆ. ಆದರು ಸಿಎಂ ಬದಲಾವಣೆ ಪ್ರಶ್ನೆ ಪದೇ ಪದೇ ಕೇಳಿ ಬರುತ್ತಿದೆ. ಹಾಗಾಗಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ ಎಂದು ಸಚಿವರಾದ ಜಗದೀಶ್ ಶೆಟ್ಟರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಸಿಎಂ ಆಗುವ ವಿಚಾರವಾಗಿ ನಾನು ಏನು ಹೇಳುವುದಿಲ್ಲ. ಹಾಗೆ ಸಿಎಂ ಸ್ಥಾನ ಬದಲಾವಣೆಗೆ ಬಗ್ಗೆಯು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಅಂತಾ ಬೋರ್ಡ್ ಹಾಕಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ. ಈ ವಿಷಯವಾಗಿ ಪಕ್ಷದಲ್ಲಿ ಯಾರಾದರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಅರವಿಂದ ಬೆಲ್ಲದ್ ಮುಂದಿನ ಸಿಎಂ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ. ಯಾರ ಯಾರ ಹಣೆಯಲ್ಲಿ ಏನು ಇರುತ್ತದೋ ಅದು ಆಗುತ್ತದೆ. ಹೈಕಮಾಂಡ್ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದೆ. ಅರವಿಂದ ಬೆಲ್ಲದ್ ನಿಮ್ಮನ್ನು ಓವರ್ ಟೇಕ್ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ಬೆಲ್ಲದ್ ಅವರ ಸ್ವಭಾವ ಆಗಿದೆ ಎನ್ನುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.