ಸಿಡಿಯಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ಕಾಂಗ್ರೆಸ್ ಮುಖಂಡ!ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‌ಐಟಿ ಸುಪರ್ದಿಗೆ ವಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಸಂಸದ, ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರ ಮಾರ್ಗದರ್ಶನದಲ್ಲಿ ತನಿಖೆ ಈಗಾಗಲೇ ಆರಂಭಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಎಸ್‌ಐಟಿ ರಚನೆಯಾಗುತ್ತಿದ್ದಂತೆಯೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಹೇಳಿಕೆ ನೀಡಿದ್ದು, “ಕೆಲವು ಕಾಂಗ್ರೆಸ್ ನಾಯಕರ ಹೆಸರು ಪಟ್ಟಿಯಲ್ಲಿದೆ”ಎನ್ನುವ ಸ್ಪೋಟಕ ಹೇಳಿಕೆಯನ್ನು ನೀಡಿದ್ದರು.

ಇನ್ನು ಇವರ ಸಹೋದರ ಸುರೇಶ್ ಈ ಬಗ್ಗೆ ಮಾತನಾಡುತ್ತಾ, “ರಾಸಲೀಲೆ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನವನ್ನು ಯಡಿಯೂರಪ್ಪ ಸರಕಾರ ಮಾಡುತ್ತಿದೆ”ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಪಕ್ಷದವರ ಕೆಲವರ ಹೆಸರು ಪಟ್ಟಿಯಲ್ಲಿದೆ, ಡಿಕೆಶಿ
‘ನಮ್ಮ ಪಕ್ಷದ ಮುಖಂಡರು ಮತ್ತು ಲೀಗಲ್ ಟೀಂ ಜೊತೆ ಮಾತುಕತೆ ನಡೆಸುತ್ತೇವೆ, ನಮ್ಮ ಪಕ್ಷದವರ ಕೆಲವರ ಹೆಸರು ಪಟ್ಟಿಯಲ್ಲಿದೆ ಎನ್ನುವ ವಿಚಾರ ಗೊತ್ತಾಗಿದೆ. ವಿಚಾರಣೆ ಯಾವ ದಾರಿಯಲ್ಲಿ ಸಾಗುತ್ತದೆ, ಇದರ ಸತ್ಯಾಸತ್ಯತೆ ಏನು ಎನ್ನುವುದನ್ನು ತಿಳಿದು ಮುಂದೆ ಪ್ರತಿಕ್ರಿಯಿಸುವೆ’ಎಂದು ಡಿ.ಕೆ.ಶಿವಕುಮಾರ್ ಶುಕ್ರವಾರ (ಮಾ 12) ಪ್ರತಿಕ್ರಿಯೆಯನ್ನು ನೀಡಿದ್ದರು.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್, ‘ಒಬ್ಬರಿಗೆ ಕ್ಲೀನ್ ಚಿಟ್ ನೀಡಲು ಸಮಿತಿ ರಚಿಸಿ, ವಿಚಾರಣೆ ಆರಂಭಿಸಿದ್ದಾರೆ. ಎಫ್‍ಐಆರ್ ಇಲ್ಲದೇ ವಿಚಾರಣೆ ನಡೆಸುತ್ತಿರುವ ಸರಕಾರದ ಹಿಂದಿನ ಉದ್ದೇಶವಾದರೂ ಏನು’ಎಂದು ಸುರೇಶ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

‘ಇಡೀ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಪ್ರಯತ್ನ ಇದಲ್ಲದೇ ಇನ್ನೇನು. ಸಾರ್ವಜನಿಕರ ಎದುರು ಸಂಭಾವಿತರೆಂದು ತೋರಿಸಿಕೊಳ್ಳಲು ಇದೊಂದು ಕಣ್ಣೊರೆಸುವ ತಂತ್ರ. ಈ ವಿಚಾರದಲ್ಲಿ ಸತ್ಯಾಂಶ ಹೊರಬರಬೇಕಾದರೆ ಎಫ್‍ಐಆರ್ ದಾಖಲಿಸಬೇಕಲ್ಲವೇ’ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು
ಇದೇ ರೀತಿಯ ಹೇಳಿಕೆಯನ್ನು ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದರು. ‘ಎಸ್‌ಐಟಿ ರಚನೆ ಎನ್ನುವುದು ತಿಪ್ಪೇಸಾರಿಸುವ ತಂತ್ರ. ಇದರಿಂದ ಯಾವ ತನಿಖೆಯೂ ಆಗಲ್ಲ, ಯಾರಿಗೂ ಶಿಕ್ಷೆಯೂ ಆಗಲ್ಲ. ಆದರೆ ಯಾರ ವಿರುದ್ಧ ತನಿಖೆ ಮಾಡ್ತಾರೆ? ಏನಂತ ತನಿಖೆ ಮಾಡ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ? ಎಫ್ಎಸ್ಎಲ್ ರಿಪೋರ್ಟ್ ನಕಲಿ ಅಂತ ಬರಬಹುದು’ಎಂದು ಎಚ್ಡಿಕೆ ಪ್ರತಿಕ್ರಿಯಿಸಿದ್ದರು.