ಬೆಂಗಳೂರಿನ ಯುವತಿ ಬಂಧನ ; ಗೃಹಸಚಿವ ಬೊಮ್ಮಾಯಿ ಪ್ರತಿಕ್ರಿಯೆ!ಬೆಂಗಳೂರು: ದೆಹಲಿ ಪೊಲೀಸರು ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿದ ಕ್ರಮವನ್ನು ಸಮರ್ಥಿಸಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅವರನ್ನು ಬಂಧಿಸಿದ ರೀತಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ದಿಶಾ ರವಿ ಪ್ರಕರಣ ದೆಹಲಿ ಕೋರ್ಟ್ ಮುಂದೆ ಇರುವುದರಿಂದ ಆ ಬಗ್ಗೆ ನಾನು ಹೆಚ್ಚಿಗೆ ಏನು ಹೇಳಲಾರೆ ಎಂದಿದ್ದಾರೆ.

ದೆಹಲಿ ರೈತ ಪ್ರತಿಭಟನೆಯ ಟೂಲ್‍ಕಿಟ್ ಪ್ರಕರಣದಲ್ಲಿ ದಿಶಾ ರವಿ ಬಂಧನ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತದೆ. ಪ್ರೋಟೋಕಾಲ್ ಕೆಲವೊಂದರಲ್ಲಿ ಅನುಸರಿಸಲ್ಲ. ನಾವು ಕೂಡ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತೇವೆ. ಇದೀಗ ದೆಹಲಿ ಪೊಲೀಸರ ಬಳಿ ದಿಶಾ ವಿರುದ್ಧ ಕೆಲವು ಸಾಕ್ಷ್ಯಗಳಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪ್ರಕರಣ ದೆಹಲಿ ಕೋರ್ಟ್‍ನಲ್ಲಿದೆ. ಹೀಗಾಗಿ ನಾನು ಈ ವಿಚಾರದಲ್ಲಿ ಹೆಚ್ಚಿಗೆ ಹೇಳಲಾರೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಪ್ರತಿಪಕ್ಷಗಳು, ಹೋರಾಟಗಾರರು, ಲೇಖಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದಿಶಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದಿಶಾ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹಲವು ನಾಯಕರು ಕಿಡಿ ಕಾರಿದ್ದಾರೆ. #ReleaseDishaRavi #IndiaBeingSilenced ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಹಲವು ನಾಯಕರು ಟ್ವೀಟ್‌ ಮಾಡಿದ್ದು, ಭಾರತವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ