“ಸಂಪೂರ್ಣ ಕಾಂಗ್ರೆಸ್ ಪಕ್ಷವನ್ನು ಮುಗಿಸೋದಕ್ಕೆ ಸೇರಿದ್ದಾರೆ”ಹಾಸನ: ಕಾಂಗ್ರೆಸ್ ಪಕ್ಷ ಈಗಾಗಲೇ ಬೀದಿಗೆ ಬಂದಿದೆ. ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಿದರು ಈಗ ಸಂಪೂರ್ಣವಾಗಿ ಮುಗಿಸೋಕೆ ಡಿಕೆಶಿ ಸೇರಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಅವರು ಹೇಗೆ ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು. ಹೀಗಾಗಿ ಇವರಿಬ್ಬರೂ ಸೇರಿ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುತ್ತಾರೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.

ಯತ್ನಾಳ್ ಮತ್ತು ರೇಣುಕಾಚಾರ್ಯ ಪದೇ ಪದೇ ಪಕ್ಷದ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ತಪ್ಪು. ಏನೇ ಗಂಭೀರ ವಿಚಾರವಿದ್ದರೂ ನಾಲ್ಕು ಗೋಡೆಗಳ ನಡುವೆ ಕುಳಿತು ಮಾತನಾಡಿಕೊಳ್ಳುವುದು ಒಳ್ಳೆಯದು. ಬಿಜೆಪಿ ಪಕ್ಷದಿಂದ ಯತ್ನಾಳ್ ಗೆ ನೋಟಿಸ್ ಕೊಡಲಾಗಿದೆ. ಈ ಬಗ್ಗೆ ಕೇಂದ್ರದ ನಾಯಕರು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೊಡೋಣ ಎಂದರು.