ಮಠಕ್ಕೆ ಈಶ್ವರಪ್ಪ ಭೇಟಿ- ಒಂದು ಗಂಟೆ ಚರ್ಚೆ! ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕೂಗಿನ ನಡುವೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿರುವ ಕಣ್ವಕುಪ್ಪೆ ಮಠಕ್ಕೆ ಪತ್ನಿ ಹಾಗೂ ಪುತ್ರ ಕಾಂತೇಶ್ ಜೊತೆ ಕುಟುಂಬ ಸಮೇತರಾಗಿ ಸಚಿವ ಕೆಎಸ್ ಈಶ್ವರಪ್ಪ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಆಶೀರ್ವಾದ ಪಡೆದಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲದಿಗಳಿಂದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಈ ಸಮಯದಲ್ಲೇ ಮಠಗಳಿಗೆ ಭೇಟಿ ನೀಡುತ್ತಿರುವ ಈಶ್ವರಪ್ಪ, ಕಣ್ವಕುಪ್ಪೆ ಮಠಕ್ಕೆ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ನಡೆಸಿದ್ದಾರೆ. ಸ್ವಾಮೀಜಿಗಳ ಈ ಭೇಟಿ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂಬ ಹಲವು ಅನುಮಾನಗಳು ಮೂಡಿದೆ.

ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕೇದರನಾಥ್ ನಲ್ಲಿ ಪ್ರಧಾನಿ ಮೋದಿಯವರಿಗೆ ಧೀಕ್ಷೆ ನೀಡಿದ್ದ ಸ್ವಾಮೀಜಿಯಾಗಿದ್ದು, ರಾಷ್ಟ್ರ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಕೇದಾರನಾಥ್ ನಲ್ಲಿ ಕಣ್ವಕುಪ್ಪೆ ಸ್ವಾಮಿಜಿ ಅವರಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಈ ಎಲ್ಲಾ ಆಗು ಹೋಗುಗಳ ನಡುವೆ ಈಶ್ವರಪ್ಪ ಕಣ್ವಕುಪ್ಪೆ ಸ್ವಾಮೀಜಿ ಭೇಟಿ ಸಾಕಷ್ಟು ಕೂತುಹಲ ಕೆರಳಿಸಿದ್ದು, ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.