ಸಿಡಿ ಕೇಸ್ ; ಸಿಕ್ಕಿಬಿದ್ರು ನೋಡಿ ವಿಡಿಯೋ ಮಾಡಿದ ಆರೋಪಿಗಳು!ಬೆಂಗಳೂರು: ‘ಸಿಡಿ’ ಸ್ಫೋಟಕ್ಕೆ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಅವರ ಮನವಿಯಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇದೇ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ಕೂಡ ರಚನೆ ಆಗಿದೆ. ತನಿಖಾ ತಂಡ ರಚನೆ ಆಗುತ್ತಿದ್ದಂತೆಯೆ ಕಾರ್ಯಾರಂಭ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ಎಸ್‌ಐಟಿ ತೀವ್ರ ವಿಚಾರಣೆ ನಡೆಸಿದೆ ಎಂಬ ಮಾಹಿಯಿದೆ.

ತನಿಖೆಯನ್ನು ಹೇಗೆ ಮಾಡಬೇಕು ಎಂಬ ಯೋಜನೆಯೊಂದಿಗೆ ಎಸ್‌ಐಟಿ ಕೆಲಸ ಶುರುಮಾಡಿದ್ದು, ಇನ್ನೂ ಎರಡ್ಮೂರು ದಿನಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗುವುದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಎಫ್‌ಐಆರ್ ಇಲ್ಲದಿದ್ದರೂ ಸಂಶಯ ಬಂದವರನ್ನು ಕರೆಸಿ ತನಿಖೆ ಮಾಡುವ ಅಧಿಕಾರ ಎಸ್‌ಐಟಿಗೆ ಇದೆ.

ಇನ್ನೆರಡು ದಿನದೊಳಗೆ ಅಧಿಕೃತ ದೂರು
ದೂರು ಸಲ್ಲಿಸಲಿರುವ ರಮೇಶ್ ಜಾರಕಿಹೊಳಿ
‘ಸಿಡಿ’ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇನ್ನೆರಡು ದಿನಗಳಲ್ಲಿ ತಾವೇ ಮುಂದಾಗಿ ದೂರು ಸಲ್ಲಿಸಲಿದ್ದಾರೆ ಎಂಬ ಮಾಹಿತಿಯಿದೆ. ತಮ್ಮ ವಿರುದ್ಧ ಷಡ್ಯಂತ್ರ ಮಾಡಿರುವ ಕುರಿತು ತನಿಖೆ ನಡೆಸುವಂತೆ ಅಧಿಕೃತ ದೂರು ದಾಖಲಿಸಲು ರಮೇಶ್ ಜಾರಕಿಹೊಳಿ ಅವರು ತಯಾರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಅದಕ್ಕೂ ನೊದಲು ಎಲ್ಲ ಸಿದ್ಧತೆಗಳನ್ನು ರಮೇಶ್ ಜಾರಕಿಹೊಳಿ ಹಾಗೂ ಸಹೋದರರು ಮಾಡಿಕೊಳ್ಳಲಿದ್ದಾರೆ ಎಮದು ತಿಳಿದು ಬಂದಿದೆ.

ನಂತರ ಎಫ್‌ಐಆರ್ ದಾಖಲು
ತನಿಖೆಗೆ ಸಹಾಯವಾಗುವಂತೆ ಎಫ್‌ಐಆರ್
ಈಗಾಗಲೇ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಈಗಾಗಲೇ ತನಿಖೆ ಆರಂಭಿಸಿದೆ. ಆದರೆ, ಯಾವುದೇ ಅಧಿಕೃತ ದೂರು ದಾಖಲಾಗದೇ ಸಂಪೂರ್ಣ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅಧಿಕೃತ ದೂರು ದಾಖಲಿಸಿ, ತನಿಖೆಗೆ ಸಹಕಾರ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ತಾವು ಪಡೆದುಕೊಂಡಿರುವ ಮಾಹಿತಿಯ ಪ್ರಕಾರ ‘ಸಿಡಿ’ ಹಿಂದಿದ್ದವರ ಸಂಪೂರ್ಣ ವಿವರಗಳನ್ನು ರಮೇಶ್ ಜಾರಕಿಹೊಳಿ ಕೆಲ ಹಾಕುತ್ತಿದ್ದಾರೆ ಎಂಬ ಮಾಹಿತಿಯಿದೆ. ‘ಸಿಡಿ’ ಸಿದ್ದಪಡಿಸಲು ಪ್ರಮುಖ ಪಾತ್ರ ವಹಿಸಿದವರ ಹೆಸರುಗಳ ಸಮೇತ ದೂರು ನೀಡಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಬಹುದೊಡ್ಡ ಪ್ರಕರಣವಾಗಿದ್ದು, ಪ್ರಭಾವಿಗಳು ಇರುವ ಸಾಧ್ಯತೆ ಇದೆ. ಹೀಗಾಗಿ ದೂರಿನಲ್ಲಿ ದಾಖಲಿಸುವ ಹೆಸರುಗಳ ಕುರಿತು ಸಂಪೂರ್ಣ ಅಧಿಕೃತ ದಾಖಲೆ ಸಂಗ್ರಹಿಸಿಕೊಂಡ ಬಳಿಕ ದೂರು ಕೊಡಲಾಗುತ್ತದೆ ಎಂಬ ಖಚಿತ ಮಾಹಿತಿಯಿದೆ.

‘ಸಿಡಿ’ ಪ್ರಕರಣ ಹೊರ ಬಂದ ಬಳಿಕ ಬಿಡುಗಡೆಯಾಗಿರುವ ವಿಡಿಯೋ ಕರಿತು ರಮೇಶ್ ಜಾರಕಿಹೊಳಿ ಅವರು ನಿರಾಕರಿಸುತ್ತಲೇ ಬಂದಿದ್ದಾರೆ. ಹೀಗಾಗಿ ಸಹೋದರನನ್ನು ನಂಬಿರುವ ಜಾರಕಿಹೊಳಿ ಸಹೋದರರು ಮುಂಬೈ ಮೂಲದ ಖಾಸಗಿ ಡಿಟೆಕ್ಟಿವ್ ಸಂಸ್ಥೆಗೆ ತನಿಖೆ ಮಾಡಲು ವಹಿಸಿದ್ದಾರೆ. ಅದರಂತೆ ಈಗಾಗಲೇ ಆ ಸಂಸ್ಥೆ ಈ ಪ್ರಕರಣದಲ್ಲಿ ಕಳೆದ ಒಂದು ವರ್ಷದಲ್ಲಿ ಯಾರು ಯಾರೊಂದಿಗೆ ದೂರವಾಣಿ ಸಂಪರ್ಕ ಮಾಡಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿದೆ ಎನ್ನಲಾಗುತ್ತಿದೆ. ಈಗಾಗಲೇ ಸುಮಾರು 6 ರಿಂದ 7 ಸಾವಿರ ದೂರವಾಣಿ ಕಾಲ್ ರೆಕಾರ್ಡ್ ಲಭ್ಯವಾಗಿದೆ ಎಂಬ ಮಾಹಿತಿಯಿದೆ.

ಧೈರ್ಯವಾಗಿ ಮಾಧ್ಯಮ ಎದುರಿಸಿದ್ದ ರಮೇಶ್ ಜಾರಕಿಹೊಳಿ
ಎಸ್‌ಐಟಿಗೆ ಖಾಸಗಿ ಡಿಟೆಕ್ಟಿವ್ ಕಲೆ ಹಾಕುವ ಮಾಹಿತಿ?
‘ಸಿಡಿ’ ಸಂಪೂರ್ಣ ನಕಲಿಯಾಗಿದೆ. ಅದನ್ನು ಸೃಷ್ಟಿ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಅದಕ್ಕೆ ಪೂರಕವಾದ ಮಾಹಿತಿಗಳು ಖಾಸಗಿ ತನಿಖಾ ಸಂಸ್ಥೆಗೆ ಲಭ್ಯವಾಗಿವೆ ಎನ್ನಲಾಗಿದೆ. ಅದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಧೈರ್ಯವಾಗಿ ಮಾಧ್ಯಮಗಳ ಎದುರು ನಕಲಿ ‘ಸಿಡಿ’ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಖಾಸಗಿ ಕಂಪನಿ ನಡೆಸುತ್ತಿರುವ ತನಿಖೆಯಲ್ಲಿ ದೊರೆಯುವ ದಾಖಲೆಗಳನ್ನು ಎಸ್‌ಐಟಿಗೆ ಸಲ್ಲಿಸಿ, ತಮಗೆ ದೊರೆತ ದಾಖಲೆ ಆಧಾರದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಲು ಜಾರಕಿಹೊಳಿ ಸಹೋದರರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ವಕೀಲರ ತಂಡ
ದೆಹಲಿ ವಕೀಲರಿಂದ ಕಾನೂನು ಸಮರ?
‘ಸಿಡಿ’ ಬಿಡುಗಡೆ ಆಗುತ್ತಿದ್ದಂತೆಯೆ ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಸಂಪರ್ಕಿಸಿದ್ದರು. ಹೈಕಮಾಂಡ್ ಮೊದಲೇ ಈ ಬಗ್ಗೆ ರಮೇಶ್ ಅವರಿಗೆ ಮಾಹಿತಿ ನೀಡಿದ್ದರಿಂದ ಇದು ನಿರೀಕ್ಷಿತ ಎಂದು ಹೈಕಮಾಂಡ್ ಅಂದು ರಾತ್ರಿ ಹೇಳಿತ್ತಂತೆ. ಆದರೆ ಆ ಸಂದರ್ಭದಲ್ಲಿ ಮೊದಲು ರಾಜೀನಾಮೆ ಕೊಡಿ ಎಂದು ರಮೇಶ್ ಜಾರಕಿಹೊಳಿ ಅವರಿಗೆ ಸೂಚಿಸಿದ ಬಗ್ಗೆ ಮಾಹಿತಿಯಿದೆ.

ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ಬಿಜೆಪಿ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರಿಗೆ ಸಹಕಾರ ನೀಡುತ್ತಿದೆ ಎಂದು ತಿಳಿದು ಬಂದಿದ್ದು. ದೆಹಲಿಯಿಂದ ಪಕ್ಷದ ವತಿಯಿಂದಲೇ ನಾಲ್ವರು ನ್ಯಾಯವಾದಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗ ಇರುವುದು ‘ಸಿಡಿ’ ಸಂಪೂರ್ಣ ನಕಲಿಯಾ? ಅಥವಾ ಹನಿಟ್ರ್ಯಾಪ್ ಆಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ. ಆದರೆ ತಾಂತ್ರಿಕವಾಗಿ ‘ಸಿಡಿ’ ಅಸಲಿ ಎಂದು ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿಯೂ ಪತ್ತೆಯಾಗುವುದು ಕಷ್ಟ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಇಡೀ ‘ಸಿಡಿ’ ಪ್ರಕರಣ ಕುತೂಹಲ ಮೂಡಿಸಿದೆ.