ಬೆಂಗಳೂರು: ಇದೀಗ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಹಲವರು ಅದು ಹನಿಟ್ರ್ಯಾಪ್ ಎಂದರೆ, ಮತ್ತೆ ಕೆಲವರು ಅದೇನೆ ಇರಲಿ ದೊಡ್ಡ ಸ್ಥಾನದಲ್ಲಿರುವವರು ಇಂಥ ಸಣ್ಣತನ ಮಾಡಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪೊಲೀಸ್ ತನಿಖೆ ಮುಂದುವರೆದಿದ್ದು, ತನಿಖೆಯ ನಂತರವಷ್ಟೇ ನಿಜಾಂಶ ಹೊರಗೆ ಬರಲಿದೆ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಇಬ್ಬರೂ ಒಪ್ಪಿದ್ದಾರೆ, ಹೀಗಾಗಿ ಅದು ಅತ್ಯಾಚಾರವಾಗಲ್ಲ ಎಂದಿದ್ದಾರೆ. ಇದರಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಬಲಿಪಶು ಮಾಡಲು ಪ್ರಯತ್ನ ಮಾಡಲಾಗಿದೆ. ಅದೇ ಹಿನ್ನೆಲೆಯಲ್ಲಿ ಷಡ್ಯಂತ್ರದಿಂದ ಈ ರೀತಿ ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆಯಾಗಬೇಕು. ತಕ್ಷಣವೇ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಡಿಯೋ ನೋಡಿದರೆ ಸಂತ್ರಸ್ತ ಮಹಿಳೆ ನಗುನಗುತ್ತಾ ಮಾತನಾಡಿರುವುದು ಕಂಡು ಬರುತ್ತದೆ. ಇದರಲ್ಲಿ ಬಲಾತ್ಕಾರ ಇಲ್ಲ, ಅದು ಖಾಸಗಿ ವಿಚಾರ ಎಂದು ತಿಳಿದು ಬರುತ್ತದೆ. ದೂರು ಕೊಡುವ ಮುಂಚೆಯೆ ರಷ್ಯಾದಿಂದ ವಿಡಿಯೋ ಅಪ್ಲೋಡ್ ಆಗಿದೆ. ಜೊತೆಗೆ ಆ ಮಹಿಳೆಯೂ ದೂರು ನೀಡಿಲ್ಲ. ದೂರುದಾರರಿಗೂ ಆ ಮಹಿಳೆಗೂ ಏನು ಸಂಬಂಧ? ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ನಾನು ರಮೇಶ್ ಜಾರಕಿಹೊಳಿ ಅವರೊಂದಿಗೆ ಕೇವಲ ಸಂತೋಷದ ಸಂದರ್ಭಗಳಲ್ಲಿ ಮಾತ್ರವಲ್ಲ ಈ ಕಷ್ಟದ ಸಂದರ್ಭದಲ್ಲಿಯೂ ಜೊತೆಯಾಗಿದ್ದೇನೆ. ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಟ್ಟಾಗ ನೋವಾಯಿತು, ಕಣ್ಣೀರು ಬಂತು. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ರೇಣುಕಾಚಾರ್ಯ ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಅವರು ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಮಾ. 02 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ದೂರು ಸಲ್ಲಿಸಿದ್ದರು. ಅದಾದ ಬಳಿಕ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ಮಾರ್ಚ್ 3ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.