ಜಮೀರ್ ಮಾತು ಕಾಂಗ್ರೆಸ್‍ಗೆ ಬಿಕ್ಕಟ್ಟು! ಕಾಂಗ್ರೆಸ್‍ಗೆ ಕಂಟಕವಾಗುತ್ತಾ ಈ ಗುಟ್ಟುಎರಡು ವರ್ಷದ ನಂತರ ಕಾಂಗ್ರೆಸ್‍ನಲ್ಲಿ ಶುರುವಾಗಬಹುದಾಗಿದ್ದ ಸಂಭವನೀಯ ಅಂತಃಕಲಹ ಈಗಲೇ ಆರಂಭವಾದಂತೆ ಕಾಣುತ್ತಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು ಈಗ ಹಾದಿ ರಂಪ, ಬೀದಿ ರಂಪ ಮಾಡಿಕೊಳ್ಳಲು ವೇದಿಕೆ ಸಿದ್ಧವಾದಂತಿದೆ. ನಾನಾ…?ನೀನಾ..? ಫೈಟ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಆರಂಭವಾಗಿದೆ. ಆದರೆ ಬಹಿರಂಗ ಕದನಕ್ಕೆ ಇನ್ನೂ ಎರಡು ವರ್ಷದ ಸಮಯವಂತೂ ಇದ್ದೇ ಇತ್ತು. ಆದರೆ ಸಿದ್ದರಾಮಯ್ಯ ಅವರ ಆಸ್ಥಾನ ವಿದೂಷಕನಂತಾಡುವ ಜಮೀರ್ ಅಹಮ್ಮದ್ ಖಾನ್ ವಿವಾದದ ಕಿಡಿ ಹಚ್ಚಿದಂತೆ ಕಾಣುತ್ತಿದೆ. ಅಹಿಂದ ಕನವರಿಕೆಯಲ್ಲಿ ಜಮೀರ್ ಅಹಮ್ಮದ್‍ರನ್ನು ಅಗತ್ಯಕ್ಕಿಂತ ಜಾಸ್ತಿ ಹತ್ತಿರ ಬಿಟ್ಟುಕೊಂಡ ಸಿದ್ದರಾಮಯ್ಯ ಈಗ ಒಂದು ಹಂತದಲ್ಲಿ ಟವೆಲ್ ಕೊಡವಿ ಮುಸಿ ಮುಸಿ ನಗತೊಡತ್ತಿದ್ದಾರೆ. ಆದರೆ ಜಮೀರ್ ಅಹಮ್ಮದ್ ಮಾತುಗಳು ಕಾಂಗ್ರೆಸ್ ಅಂಗಳದ ಬೂದಿ ಮುಚ್ಚಿದ ಕೆಂಡದಲ್ಲಿ ನಿಧಾನವಾಗಿ ಹೊಗೆ ಏಳಲು ಕಾರಣವಾಗಿದೆ. ಅದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಕೊತ ಕೊತ ಕುದಿಯತೊಡಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ ಜೋರಾದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿದು ಒಂದಷ್ಟು ರಾಜಕೀಯ ಲಾಭಕ್ಕೆ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿಎಂ ಯಡಿಯೂರಪ್ಪರನ್ನು ಕಂಡರೆ ಏನೋ ಒಂಥರಾ ರೋಮಾಂಚನ ಆದವರಂತೆ ವರ್ತಿಸುತ್ತಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಇಬ್ಬರಿಗು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಲಿ ಎಂಬ ಭಾವನೆಯೇ ಇದ್ದಂತಿದೆ. ಬಿಜೆಪಿಯ ಸದ್ಯದ ಬೆಳವಣಿಗೆ ಬಗ್ಗೆ ಎಲ್ಲೂ ಗಟ್ಟಿ ಧ್ವನಿ ಎತ್ತದ ಡಿ.ಕೆ.ಶಿವಕುಮಾರ್ ಅವರ ತತ್ವ ಅವರಿಗೆ, ನಮ್ಮ ಪಕ್ಷ ನಮಗೆ ಅಂತ ವೇದಾಂತ ಮಾತನಾಡತೊಡಗಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಲು ಸೀಮಿತರಾಗಿ ಟ್ವೀಟ್ ರಾಮಯ್ಯರಾಗಿ ಉಳಿದಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟ ಬಿಜೆಪಿ ನಾಯಕರೇ ಆರೋಪಿಸಿದಂತೆ ಇದು ಕಾಂಗ್ರೆಸ್ ಬಿಜೆಪಿ ಸಮ್ಮಿಶ್ರ ಸರ್ಕಾರವೇನೋ ಎಂಬಂತಿದೆ ಕಾಂಗ್ರೆಸ್ ನಾಯಕರ ವರ್ತನೆ.

ಕಾಂಗ್ರೆಸ್ ನಾಯಕರ ಜಾಣ ಕಿವುಡು, ಜಾಣ ಕುರುಡು, ಜಾಣ ಮರೆವು ಎಲ್ಲವೂ ಬಿಜೆಪಿಗೆ ಬಲ ತುಂಬಿದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕಾದಾಡಲು ವೇದಿಕೆ ಸಿದ್ಧಪಡಿಸತೊಡಗಿದ್ದಾರೆ ಶಾಸಕ ಜಮೀರ್ ಅಹಮ್ಮದ್ ಖಾನ್. ಅವರ ಗುರಿ ಸ್ಪಷ್ಟ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಬಿಜೆಪಿಯಲ್ಲಿನ ರಾಜಕೀಯ ಅಶಾಂತಿಯ ಲಾಭ ಪಡೆಯುವ ಯೋಚನೆಯೂ ಮಾಡದ ಕೈ ಪಾಳಯದಲ್ಲಿ ಸೂಸೈಡ್ ಬಾಂಬರ್ ರೀತಿ ಜಮೀರ್ ಅಹಮ್ಮದ್ ಖಾನ್ ಕಾರ್ಯ ನಿರ್ವಹಿಸತೊಡಗಿದ್ದಾರೆ. ಅಷ್ಟಕ್ಕೂ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದನ್ನು ಈಗಲೇ ಮಾತನಾಡಬೇಕಾದ ಅಗತ್ಯ ಅಥವಾ ಅನಿವಾರ್ಯತೆ ಕಾಂಗ್ರೆಸ್ ಪಾಳಯದಲ್ಲಿ ಖಂಡಿತ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಚುನಾವಣೆಯ ನಂತರ ಅಧಿಕಾರ ಯಾರಿಗೆ ಅನ್ನೋದು ತೀರ್ಮಾನ ಆಗಲಿದೆ. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?
[ಈ ಬರಹದಲ್ಲಿರುವ ಅಭಿಪ್ರಾಯಗಳು
ರಾಜಕೀಯ ವಿಶ್ಲೇಷಕರದ್ದು]