ಜಾರಕಿಹೊಳಿ ಮತ್ತೆ ಮಂತ್ರಿ ಆಗಲಿದ್ದಾರೆ! ಸಾಹುಕಾರ್ ಪರ ಸಾಹುಕಾರ್ ಬ್ಯಾಟಿಂಗ್ಬಾಗಲಕೋಟೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಪ್ರಸಂಗ ಬಂದರೆ ಅವರು ಮತ್ತೆ ಮಂತ್ರಿ ಆಗಲಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಭವಿಷ್ಯ ನುಡಿದಿದ್ದಾರೆ. ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿದ್ದ ಅವರು ನೂತನ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವುದಿಲ್ಲ. ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ. ಅವರು ಸಚಿವರಾಗಬೇಕೆಂಬುದು ನಮ್ಮ ಆಶಯ. ಅವರನ್ನು ಸಚಿವರಾಗುವಂತೆ ಫಿಟ್ ಮಾಡುತ್ತೇವೆ ಎಂದು ಹೇಳಿದರು. ರಮೇಶ ಜಾರಕಿಹೊಳಿ ಅತ್ಯಂತ ಸಾಮಾನ್ಯ ವ್ಯಕ್ತಿ. ಅವರ ಮೇಲೆ ಕ್ರಿಯೇಟ್ ಮಾಡಿ ಕ್ಯಾಸೆಟ್ ಮಾಡಲಾಗಿದೆ. ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ಮುಂದಿನ ಎರಡು ವರ್ಷ ಅವರು ಶಾಸಕರಾಗಿರುತ್ತಾರೆ. ಪ್ರಸಂಗ ಬಂದರೆ ಮತ್ತೆ ಸಚಿವರಾಗುತ್ತಾರೆ ಎಂದರು.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿದೆ ಎಂದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ಸಿನಲ್ಲಿನ ಸಮಸ್ಯೆಗಳು ಮೊದಲು ನಿವಾರಣೆ ಆಗಲಿ, ಅವರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಥವಾ ಸಮುದಾಯದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಘೋಷಣೆ ಆಗಲಿ, ನಂತರ ಉಳಿದಿದ್ದನ್ನು ಟೀಕಿಸಲಿ ಎಂದರು. ಮೂರನೇ ಅಲೆಯ ಮುನ್ಸೂಚನೆಯಿದ್ದು, ಅವುಗಳೊಂದಿಗೆ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.