ಮೇಯರ್ ಚುನಾವಣೆ ಎಫೆಕ್ಟ್ ; ಕಾಂಗ್ರೆಸ್ ಪಕ್ಷ ಛಿದ್ರಛಿದ್ರ!ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ.

ಮೇಯರ್ ಚುನಾವಣೆ ಮೈತ್ರಿ ವಿಚಾರದಿಂದಾಗಿ ಮೈಸೂರು ಕಾಂಗ್ರೆಸ್ ಪಾಳಯ ಛಿದ್ರ ಛಿದ್ರವಾಗಲಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪಾಲಿಕೆ ಮೈತ್ರಿ ಗೊಂದಲದ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ. ಇದರ ಬೆನ್ನಲ್ಲಿಯೇ ವಿವಿಧ ಮುಖಂಡರ ತಲೆದಂಡಗಳು ಆರಂಭವಾಗಿವೆ.

ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ತನ್ವೀರ್ ಸೇಠ್ ನಿವಾಸದ ಮುಂದೆ ಪ್ರತಿಭಟನೆ ನಡೆದಿತ್ತು. ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು. ಘೋಷಣೆ ಕೂಗಿದ ಮುಖಂಡರ ವಿರುದ್ಧ ಪಕ್ಷದ ಹೈಕಮಾಂಡ್ ಶಿಸ್ತು ಕ್ರಮವನ್ನು ಕೈಗೊಂಡಿದ್ದು, ಕಾಂಗ್ರೆಸ್ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

ಪ್ರಮುಖವಾಗಿ ನರಸಿಂಹರಾಜ ಕ್ಷೇತ್ರದಲ್ಲಿ 6 ಮಂದಿಯನ್ನು ಅಮಾನತು ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಸದಸ್ಯರು ಸಹ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ 6 ಮಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದ ತನಕ ಅಮಾನತು ಮಾಡಲಾಗಿದೆ. ಮೈಸೂರು ನಗರಾಧ್ಯಕ್ಷ ಆರ್. ಮೂರ್ತಿ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.

ಅಮಾನತುಗೊಂಡ 6 ಜನರು ಸಹ ಶಾಸಕ ತನ್ವೀರ್ ಸೇಠ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಎಲ್ಲರೂ ತನ್ವೀರ್ ಸೇಠ್ ಮನೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ವಿರುದ್ಧ ಧಿಕ್ಕಾರವನ್ನು ಕೂಗಿದ್ದರು. ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಮಾತುಕತೆ ಜವಾಬ್ದಾರಿಯನ್ನು ಶಾಸಕ ತನ್ವೀರ್‌ ಸೇಠ್ ತೆಗೆದುಕೊಂಡಿದ್ದರು.

ಆದರೆ, ಸಿದ್ದರಾಮಯ್ಯ ಸೂಚನೆ ಮೀರಿ ಮೈತ್ರಿ ನಡೆದಿದೆ ಎಂದು ತನ್ವೀರ್ ಸೇಠ್ ವಿರುದ್ಧ ವಿವಿಧ ನಾಯಕರು ಆಕ್ರೋಶಗೊಂಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು.