ಬಿಜೆಪಿ ಬಿರುಕು? ರಣತಂತ್ರ ಹೆಣೆದ ಕಟೀಲ್ಬೆಂಗಳೂರು: ಪಕ್ಷದ ನಾಯಕತ್ವ ಸಂಪುಟ ಪುನಾರಚನೆ , ಸಚಿವ ಸಂಪುಟದ ನಿರ್ಣಯಗಳ ಕುರಿತಂತೆ ಬಹಿರಂಗ ಚರ್ಚೆ ಹೀಗೆ ಹಲವಾರು ವಿಚಾರಗಳ ಕುರಿತು ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರು ಹಾಗೂ ಪಕ್ಷದ ರಾಜ್ಯ ಘಟಕದ ಮುಖಂಡರನ್ನೊಳಗೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶೀಘ್ರವೇ ಸಭೆಯೊಂದನ್ನು ಕರೆಯಲು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನಿರ್ಧರಿಸಿದ್ದಾರೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಯಡಿಯೂರಪ್ಪ ಅವರನ್ನು ಮನವಿ ಮಾಡುವುದಾಗಿ ಕಟೀಲು ಸಭೆಯಲ್ಲಿ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಪಕ್ಷದ ನಿಲುವಿನ ಕುರಿತು ಇನ್ನು ಮುಂದೆ ಯಾವುದೇ ಸಚಿವರು ಮತ್ತು ಶಾಸಕರ ಬಹಿರಂಗ ಹೇಳಿಕೆಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪಕ್ಷದ ಪ್ರಮುಖರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರ ಮತ್ತು ಪಕ್ಷದ ನಡುವೆ ಕೋವಿಡ್ ನಿರ್ವಹಣೆ, ಇತ್ತೀಚಿಗೆ ನಡೆದ ಉಪ ಚುನಾವಣೆಗಳ ಫಲಿತಾಂಶ, ಸಚಿವ ಸಿಪಿ ಯೋಗೇಶ್ವರ್ ದೆಹಲಿ ಪ್ರವಾಸ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ಹೀಗೆ ಪಕ್ಷ ಮತ್ತು ಸರಕಾರವನ್ನು ಕಾಡುತ್ತಿರುವ ಹಲವಾರು ವಿಚಾರಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇನ್ನು ಮುಂದೆ ಸಚಿವರುಗಳು ತಮ್ಮ ಜಿಲ್ಲೆಯ ಶಾಸಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಪಕ್ಷಹಾಗೂ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಕಟೀಲು ಸಭೆಯಲ್ಲಿ ತಾಕೀತು ಮಾಡಿದರು.

ಇದನ್ನೂ ಓದಿ :  ಅಸಮಾಧಾನ ಹೊರಹಾಕಿದ ಪ್ರಭು ಚವ್ಹಾಣ್? ಕೆಲಸ ಮಾಡಲು ಆಗದಿದ್ದರೆ ಖುರ್ಚಿ ಕಾಲಿ ಮಾಡಿ

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಸಚಿವರಾದ ಆರ್ ಅಶೋಕ್, ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿದಂತೆ ಪ್ರಮುಖರೊಂದಿಗೆ ಚರ್ಚಿಸಿ ಪಕ್ಷದಲ್ಲಿ ಇತ್ತೀಚಿಗೆ ನಡೆದಿರುವ ಬೆಳವಣಿಗೆಗಳ ಕುರಿತಂತೆ ಸುದೀರ್ಘ ಚಿಂತನ -ಮಂಥನ ನಡೆಸಿದರು. ಪಕ್ಷದ ಶಾಸಕರಿಗೆ ಕೆಲ ಸಚಿವರು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಹಾಗೂ ಅನ್ಯ ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಸಚಿವರು ಗಳಿಗೆ ಸ್ಥಳೀಯ ಶಾಸಕರು ಸಹಕಾರ ನೀಡುತ್ತಿಲ್ಲ, ವಿಶೇಷವಾಗಿ ಅಧಿಕಾರಿಗಳ ನಡತೆ ಮತ್ತು ವರ್ಗಾವಣೆ ವಿಚಾರದಲ್ಲಿ ಸಮನ್ವಯದ ಕೊರತೆಯಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇತ್ತೀಚಿಗೆ ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮೀಣ ಉಸ್ತುವಾರಿ ಕುರಿತಂತೆ ನೀಡಿದ ಹೇಳಿಕೆಯನ್ನು ಸಚಿವ ಅಶೋಕ್ ಪರೋಕ್ಷವಾಗಿ ಸಭೆಯಲ್ಲಿ ಮುಂದಿಟ್ಟರು ಮತ್ತೊಂದೆಡೆ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾ ನಾಗ್‌ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗೆಗೆ ಕೂಡ ಚರ್ಚೆ ನಡೆಯಿತು.