ನಮ್ಮದು ಪಾಕಿಸ್ತಾನದವರದ್ದು ಒಂದೇ ಜೀನ್ಸ್ ; ಕಾಂಗ್ರೆಸ್ ಮುಖಂಡನ ವೀಡಿಯೋ ವೈರಲ್!ಹುಬ್ಬಳ್ಳಿ : ಕೇಂದ್ರ ಸರ್ಕಾರವನ್ನು ತೆಗಳುವ ಭರದಲ್ಲಿ ಪಾಕಿಸ್ತಾನವನ್ನು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೊಗಳಿದ್ದಾರೆ. ಪಾಕಿಸ್ತಾನದವರದು, ಭಾರತದವರದು ಒಂದೇ ಜೀನ್ಸ್‌ ಎಂದು ಹೇಳಿದ್ದಾರೆ. ಇದರ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ನವಲಗುಂದದಲ್ಲಿ ಕಳೆದ ಎರಡು ದಿನದ ಹಿಂದೆ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿಲಕುಮಾರ ಪಾಟೀಲ, ಕೊರೋನಾ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಕ್ರಮ ಕೈಗೊಳ್ಳಲಿಲ್ಲ. ಬರೀ ಲಾಕ್‌ಡೌನ್‌ ಘೋಷಿಸಿತು. ಇದರಿಂದ ದುಡಿಯುವವರಿಗೆ ಕೆಲಸವಿಲ್ಲದಂತಾಯಿತು. ದುಡಿದುಕೊಂಡು ತಿನ್ನುವವರು ಸಾಕಷ್ಟು ಜನರು ಮೃತಪಟ್ಟರು. ಕೊರೋನಾ ಈಗ ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ ಎಂದರು.

ಇದನ್ನೂ ಓದಿ :  ಕಾಂಗ್ರೆಸ್ ಪಕ್ಷದಲ್ಲೇ ಶುರುವಾಗಿದೆ ಒಳಜಗಳ ; ಸಿದ್ದು ವರ್ಸ್ಸಸ್ ಇಬ್ರಾಹಿಂ!

ಪಾಕಿಸ್ತಾನ, ಬಾಂಗ್ಲಾದೇಶ, ನಾವೆಲ್ಲ ಒಂದೇ ಜೀನ್ಸ್‌ನವರು. ನಾವೆಲ್ಲ ಅಣ್ಣ ತಮ್ಮಂದಿರು. ಅಲ್ಲಿಯವರು ಇಲ್ಲಿಗೆ ಬಂದರೆ ಯಾವುದೇ ವ್ಯತ್ಯಾಸ ನಮಗೆ ಕಾಣುವುದಿಲ್ಲ. ಪಾಕಿಸ್ತಾನದಲ್ಲಿ ದಿನಕ್ಕೆ 300-400 ಜನರು ಮಾತ್ರ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ನಮ್ಮಲ್ಲಿ ದಿನಕ್ಕೆ 78- 79 ಸಾವಿರ ಕೊರೋನಾ ಕೇಸ್‌ಗಳು ಪತ್ತೆಯಾಗುತ್ತಿವೆ. ನಮ್ಮ ಸರ್ಕಾರ ಕೋವಿಡ್‌ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮಲ್ಲಿ ಗ್ರಾಫ್‌ ಇನ್ನೂ ಮೇಲೆರುತ್ತಿದೆ. ಅಲ್ಲಿ ಇಳಿಮುಖವಾಗುತ್ತಿದೆ ಎಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೊಳಗಾಗಿದೆ.