ಅಸಮಾಧಾನ ಹೊರಹಾಕಿದ ಪ್ರಭು ಚವ್ಹಾಣ್? ಕೆಲಸ ಮಾಡಲು ಆಗದಿದ್ದರೆ ಖುರ್ಚಿ ಕಾಲಿ ಮಾಡಿ



ಕಾಲುಬಾಯಿ ಲಸಿಕೆ ವಿತರಣೆ, ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆ ಭರ್ತಿ ಹಾಗೂ ಗೋಶಾಲೆಗಳಿಗೆ ಸಂಬಂಧಿಸಿದಂತೆ ತುರ್ತು ಸಭೆ ನಡೆಸಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ತಾನು ನಿರ್ದೇಶಿಸಿದ ಕೆಲಸ ಮಾಡಲು ಆಗದಿದ್ದರೆ ಕುರ್ಚಿ ಖಾಲಿ ಮಾಡಿ. ನಿಮ್ಮಿಂದ ಇಲಾಖೆಯ ಅಭಿವೃದ್ಧಿ ಕೆಲಸ ಕುಂಠಿತವಾದರೆ ಸಹಿಸುವುದಿಲ್ಲ ಎಂದು ನಿರ್ದೇಶಕರು ಮತ್ತು ಆಯುಕ್ತರ ಮೇಲೆ ಗರಂ ಆದರು. ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಿಂಗ್ ವ್ಯಾಕ್ಸಿನ್ ನಡೆಸಲು ಅಧಿಕಾರಿಗಳಿಗೆ ಆದೇಶಿಸಿದರು.

ರೋಗೋದ್ರೇಕ ಕಂಡುಬಂದ 5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಲು ಸೂಚಿಸಿದರು. ಕಾಲುಬಾಯಿ ರೋಗಕ್ಕೆ ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿ, ಅಧಿಕಾರಿ ಹಾಗೂ ಕೆಎಂಎಫ್ ಸಿಬ್ಬಂದಿ ಬಳಸಿಕೊಂಡು ಲಸಿಕೆ ನೀಡಲಾಗುವುದು. ಸಿಬ್ಬಂದಿ ತೀವ್ರ ಕೊರತೆಯಿದ್ದರೂ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 61 ಪಶುವೈದ್ಯಾಧಿಕಾರಿಗಳು, 32 ಪಶುವೈದ್ಯಕೀಯ ಪರೀಕ್ಷಕರು ಹಾಗೂ 83 ಪಶುವೈದ್ಯಕೀಯ ಸಹಾಯಕರ ಹುದ್ದೆಗೆ ತಡೆ ನೀಡಲಾಗಿತ್ತು. ಸದ್ಯ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.

ಇದನ್ನೂ ಓದಿ :  ಕುಮಾರಸ್ವಾಮಿ ಪಲ್ಟಿ ಗಿರಾಕಿ: ಶಾಸಕ ವ್ಯಂಗ್ಯ

ರೈತರ ಸಮಸ್ಯೆ ಆಲಿಸಲು ವಾರ್ ರೂಮ್ ತಯಾರಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯದಲ್ಲೇ ಉದ್ಘಾಟಿಸಲಿದ್ದಾರೆ. 15 ಜಿಲ್ಲೆಗಳಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿ ನಡೆಯುತ್ತಿದ್ದು ಉಳಿದ 15 ಜಿಲ್ಲೆಗಳಲ್ಲಿ ಪಶುಸಂಜೀವಿನಿಗೆ ಭಾರಿ ಬೇಡಿಕೆಯಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಉಳಿದಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು. ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತರಾದ ಬಸವರಾಜೇಂದ್ರ, ನಿರ್ದೇಶಕ ಶಿವರಾಮ್ ಸೇರಿ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.