ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ ರೋಹಿಣಿ ಸಿಂಧೂರಿ



ಮೈಸೂರು: ಅರನೆ ನಗರಿಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಗಳ ಅಧಿಕೃತ ಸರ್ಕಾರಿ ನಿವಾಸದಲ್ಲಿ ನಿರ್ಮಿಸಿದ್ದ ಈಜುಕೊಳ ವಿಚಾರ ದೊಡ್ಡ ವಿವಾದವಾಗಿತ್ತು. ಈ ಬಗ್ಗೆ ಶಾಸಕ ಸಾರಾ ಮಹೇಶ್ ಸರ್ಕಾರಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ವಿಚಾರಣೆಗೆ ನಿರ್ದೇಶಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ವರದಿಯ ವಿವರ ಇಲ್ಲಿದೆ. ಈಜುಕೊಳ ನಿರ್ಮಾಣದಲ್ಲಿ ಆಗಿರುವ ಪ್ರಮುಖ ನ್ಯೂನತೆಗಳ ಪ್ರತ್ಯೇಕ ಪಟ್ಟಿ ಮಾಡಲಾಗಿದೆ

ನ್ಯೂನತೆಗಳ ಹೀಗಿವೆ..

  1. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 32 ಲಕ್ಷ ರೂ. ಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದ್ದು, ಅಂದಾಜುಪಟ್ಟಿಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.
  2. ಈಜುಕೊಳದ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ.
  3. ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ.
  4. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.
  5. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣವು ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.