ಕಿಡಿಕಾರಿದ ಸಿದ್ದರಾಮಯ್ಯಅಭಿಪ್ರಾಯ ಹೇಳಲು ಎಲ್ಲರಿಗೂ ಸ್ವತಂತ್ರ ಇದೆ. ನಾನು ಮುಖ್ಯಮಂತ್ರಿಯಾಗಬೇಕು ಎಂಬುದು ಶಾಸಕರು ಹಾಗೂ ಜನರ ಕೂಗು ಇದ್ದಿರಬಹುದು. ಸಿದ್ದರಾಮಯ್ಯ ಅವರೇ ಸಿಎಂ ಅಂತ ಹೇಳಿ ಎಂದು ನಾನೇನೂ ಯಾರಿಗೂ ಹೇಳಿಕೊಟ್ಟಿಲ್ಲ. ಇಷ್ಟಕ್ಕೂ ನಾನು ಎಲ್ಲಾದರೂ ನಾನೇ ಸಿಎಂ ಎಂದು ಹೇಳಿದ್ದೀನಾ ಎಂದ ಅವರು, ಇದು ಸದ್ಯ ಹೆಚ್ಚು ಚರ್ಚಿತವಾಗುವ ವಿಷಯವೂ ಅಲ್ಲ ಎಂದರು. ಕಾಂಗ್ರೆಸ್‌ನಲ್ಲಿ ತನ್ನದೇ ಆದ ರಾಜಕೀಯ ವ್ಯವಸ್ಥೆ ಇದೆ. ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದುಕೊಳ್ಳಬೇಕು. ಆಗ ಶಾಸಕರು ಸೇರಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಸಿಎಂ ವಿಷಯ ಕುರಿತು ನಮ್ಮ ಪಕ್ಷದಲ್ಲಿ ಎಲ್ಲೂ ಚರ್ಚೆಯಾಗಿಲ್ಲ. ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರಷ್ಟೇ ಎಂದರು.

ನ್ಯಾಯಾಂಗ ತನಿಖೆಯಾಗಲಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚಾಮರಾಜನಗರದಲ್ಲಿ 36 ಜನರು ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟರು. ಆದರೆ, ಸರ್ಕಾರ ಸಾವಿನ ಲೆಕ್ಕವನ್ನು ಸಹ ಮುಚ್ಚಿಟ್ಟಿತ್ತು. ಐಸಿಯು, ಆಕ್ಸಿಜನ್ ಇಲ್ಲದೆ ಅದೆಷ್ಟೋ ಜನರು ಸಾವಿಗೀಡಾದರು. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದ್ದುದು ನಿಜವೋ? ಸುಳ್ಳೋ? ಸರ್ಕಾರ ತಪ್ಪು ಲೆಕ್ಕ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಒಟ್ಟಾರೆ ಡೆತ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಲ್ಲರಿಗೂ ನ್ಯಾಯ ಇರಬೇಕು. ಆದರೆ, ಆಗುತ್ತಿರುವುದೇ ಬೇರೆ. ರಮೇಶ್‌ಗೆ ಒಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯನಾ? ಎಂದು ಕೇಳಿದರು. ಜಿಂದಾಲ್‌ಗೆ ಭೂಮಿ ಪರಭಾರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸದ್ಯದ ಮಾರುಕಟ್ಟೆಗೆ ದರಕ್ಕೆ ಭೂಮಿ ಕೊಡಲಿ. ಈ ಹಿಂದೆ ಒಪ್ಪಂದ ಮಾಡಿಕೊಂಡಿರುವ ದರಕ್ಕೆ ಭೂಮಿ ನೀಡುವುದು ಸರಿಯಲ್ಲ ಎಂದರು.