ಭವಿಷ್ಯದ ಸಿಎಂ ಬಗ್ಗೆ ಬಿಸಿಬಿಸಿ ಚರ್ಚೆಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಪೂರಕ ವಾತಾವರಣವಿದೆ. ಹಾಗಾಗಿ ಜನರಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಮೂಡುವಂತೆ ಕಾರ್ಯನಿರ್ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟ ಸೂಚನೆ ನೀಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಭವಿಷ್ಯದ ಸಿಎಂ ಯಾರೆಂಬ ಬಗ್ಗೆ ಯಾವುದೇ ಚರ್ಚೆ ಬೇಡ ಎಂದೂ ಕಿವಿಮಾತು ಹೇಳಿದ್ದಾರೆ. ನವದೆಹಲಿಯ ರಾಹುಲ್‌ಗಾಂಧಿ ಅವರ ನಿವಾಸದಲ್ಲಿ ಸುಮಾರು ೪೫ ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬದಲಾವಣೆ ಕುರಿತು ವಿವರಿಸಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಜಿಲ್ಲೆ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಪಕ್ಷ ಇನ್ನಷ್ಟು ಜನಮುಖಿಯಾಗಿ ಕೆಲಸ ಮಾಡುವ ಸಿದ್ದತೆ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಡಿಕೆಶಿ ಅವರಿಗೆ ಕೆಲವು ಸ್ಪಷ್ಟ ಸೂಚನೆ ರವಾನಿಸಿರುವ ರಾಹುಲ್, ಜಿಪಂ – ತಾಪಂ ಸೇರಿದಂತೆ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಬೇಕು. ಅದಕ್ಕೆ ಅಗತ್ಯವಿರುವ ಕಾರ್ಯತಂತ್ರ ರೂಪಿಸಿ, ರಾಜ್ಯದಲ್ಲಿ ಬಿಜೆಪಿ ದುರಾಡಳಿತ ವಿರುದ್ಧ ಜನತೆ ಬೇಸತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರತಿಪಕ್ಷವಾದ ನಮ್ಮ ಜವಾಬ್ದಾರಿ ಹೆಚ್ಚಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸರ್ಕಾರದ ವೈಫಲ್ಯದ ವಿರುದ್ಧ ರಣಕಹಳೆ ಮೊಳಗಿಸಿ ಎಂದು ಡಿಕೆಶಿ ಅವರಿಗೆ ಹುರಿದುಂಬಿಸಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಇರಬೇಕೇ ವಿನಃ ಅನಗತ್ಯವಾಗಿ ಮುಂದಿನ ಸಿಎಂ ಅಭ್ಯರ್ಥಿ ಯಾರೆಂಬ ವಿಷಯ ಪ್ರಮುಖ ಚರ್ಚೆಯ ವಿಷಯ ಅಲ್ಲವೇ ಅಲ್ಲ. ಹಾಗಾಗಿ ಇದಕ್ಕೆ ಕಡಿವಾಣ ಹಾಕಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಯಾವುದೇ ರೀತಿಯ ಕ್ರಮಕ್ಕೂ ನೀವು ಸ್ವತಂತ್ರರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಿರಿ ಎಂದೂ ರಾಹುಲ್‌ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಿದ್ದಾರೆಂದು ಹೇಳಲಾಗಿದೆ.