ಕೊಡಗಿನ ಕರಾಳ ಸತ್ಯ?ಪ್ರಕೃತಿಯ ಕೊಡುಗೆಯಾಗಿರುವ ಕೊಡಗು ಅತ್ಯಂತ ಪುಟ್ಟ ಜಿಲ್ಲೆ. ಇಲ್ಲಿ ಕೇವಲ 6 ಲಕ್ಷ ಜನರಿದ್ದಾರೆ. ಆದರೆ ಸಮಸ್ಯೆಗಳ ಸಂಖ್ಯೆ ಲೆಕ್ಕವಿಲ್ಲದಷ್ಟಿದೆ. ಕಳೆದ 20-25 ವರ್ಷಗಳಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬರುತ್ತಿರುವವರಿದ್ದರೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರೂ ಇಲ್ಲ ಎಂಬಂತಾಗಿದೆ. ದೇಶದ ಲಕ್ಷಾಂತರ ಭಕ್ತರ ಗಮನ ಸೆಳೆದಿರುವ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮವಾಗುವ ಭಾಗಮಂಡಲದ ಸಮೀಪದಲ್ಲೇ ಇರುವ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರ ಕಷ್ಟ ಅಲ್ಲಿರುವ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಈ ಗ್ರಾಮದಲ್ಲಿ ವಾಸವಿರುವ ಕುಟುಂಬಗಳು ತಮ್ಮ ಅಗತ್ಯ ಕಾರ್ಯಗಳಿಗೆ ಮತ್ತು ವಸ್ತುಗಳ ಖರೀದಿಗೆ ಮುಖ್ಯ ರಸ್ತೆಗೆ ಬಂದು ತಲುಪಬೇಕೆಂದರೆ ದೊಡ್ಡ ಹೊಳೆ ದಾಟಿಯೇ ಬರಬೇಕು. ಬೇಸಿಗೆಯಲ್ಲಿ ಹೇಗೋ ಬಂದು ಬಿಡಬಹುದು, ಆದರೆ ಮಳೆಗಾಲ ಆರಂಭವಾಯಿತೆಂದರೆ ನಿವಾಸಿಗಳಿಗೆ ಜೀವ ಕೈಗೆ ಬರುವ ಅನುಭವವಾಗುತ್ತದೆ. ತುಂಬಿ ಹರಿಯುವ ಹೊಳೆ ದಾಟುವುದೆಂದರೆ ಜೀವದ ಜೊತೆ ಜೂಟಾಟ ಆಡಿದಂತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಬೆಟ್ಟದಿಂದ ಬರುವ ಎರಡು ಹೊಳೆಗಳು ಸೇರಿ ಹರಿಯುವ ಈ ನೀರಿನಲ್ಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಇದು ಕಲ್ಲಿನಿಂದ ಕೂಡಿದ ಹೊಳೆ, ಸ್ವಲ್ಪ ನಿಯಂತ್ರಣ ತಪ್ಪಿದರೂ ದಾಟುತ್ತಿರುವವರು ನೀರು ಪಾಲಾಗುವುದು ಖಚಿತ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿರುವ ಗ್ರಾಮಸ್ಥರು ಕಳೆದ 15 ವರ್ಷಗಳಿಂದ ಗ್ರಾ.ಪಂ ಗೆ ಮನವಿ ನೀಡುತ್ತಾ ಬರುತ್ತಿದ್ದಾರೆ. ಹೇಗಾದರು ಮಾಡಿ ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಕೋರಿಕೊಂಡರೂ ಇಲ್ಲಿಯವರೆಗೆ ಇವರ ಬೇಡಿಕೆ ಈಡೇರಿಲ್ಲ.

ಕಳೆದ ವರ್ಷ ತಲಕಾವೇರಿ ಭಾಗದಲ್ಲಿ ಮಹಾಮಳೆಯ ಅನಾಹುತ ಸಂಭವಿಸಿದಾಗ ಕೋಪಟ್ಟಿ ಭಾಗದಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ಬಂದಿತ್ತು. ಜೀವ ಉಳಿಸಿಕೊಳ್ಳಬೇಕೆಂದರೆ ಅಥವಾ ತುರ್ತು ಚಿಕಿತ್ಸೆಗೆ ತೆರಳಬೇಕೆಂದರೆ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲಿಲ್ಲ. ಎಲ್ಲಾ ಸಂದರ್ಭದಲ್ಲೂ ಹೊಳೆ ದಾಟುವುದು ಅನಿವಾರ್ಯವಾಗಿದ್ದು, ವಯೋವೃದ್ಧರು ಹಾಗೂ ಮಕ್ಕಳ ಸ್ಥಿತಿಯಂತು ಉಳಿದವರ ಸಹನೆಯನ್ನು ಪರೀಕ್ಷಿಸುತ್ತದೆ

ಹೊಳೆ ಮಾರ್ಗ ಹೊರತು ಪಡಿಸಿದಂತೆ ಇರುವ ಪರ್ಯಾಯ ರಸ್ತೆಯಲ್ಲಿ 8 ಕಿ.ಮೀ ದೂರ ಸಾಗಿದರೆ ಮುಖ್ಯ ರಸ್ತೆ ಸಿಗುತ್ತದೆ. ಗ್ರಾ.ಪಂಗೆ ಕೋಟಿ, ಕೋಟಿ ಅನುದಾನ ಬಂದರೂ ಕೋಪಟ್ಟಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸೇತುವೆಯೊಂದನ್ನು ನಿರ್ಮಿಸಿಕೊಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅತಿವೃಷ್ಟಿ ಹಾನಿ ಸಂದರ್ಭ ದೊಡ್ಡವರು ಬರುತ್ತಾರೆ, ಸೇತುವೆ ನಿರ್ಮಾಣದ ಕುರಿತು ಭರವಸೆ ನೀಡುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದರಿಂದ ಬೇಸತ್ತ ಕೋಪಟ್ಟಿಯ ಸೋಮೆಟ್ಟಿ ಹಾಗೂ ಪೊಡನೋಲನ ಕುಟುಂಬಸ್ಥರು ಈ ಬಾರಿಯೂ ಮಹಾಮಳೆಗೆ ತೊಂದರೆಯಾಗಹುದೆನ್ನುವ ಆತಂಕದಲ್ಲಿ ಸುರಿಯುವ ಗಾಳಿಮಳೆಯ ನಡುವೆಯೇ ಕಾಲು ಸೇತುವೆಯೊಂದನ್ನು ನಿರ್ಮಿಸಿದರು.

ಗ್ರಾಮಸ್ಥರ ಸಹಕಾರದೊಂದಿಗೆ ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೋಪಟ್ಟಿ ಗ್ರಾಮದ ಸಂಕಷ್ಟವನ್ನು ಅರಿತು ಶಾಶ್ವತ ಸೇತುವೆ ಮತ್ತು ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.