ನನ್ನ ಕೊಲೆಗೆ ಸ್ಕೆಚ್ ಹಾಕುತ್ತಿರಬಹುದು! ಮಮತಾ ಬ್ಯಾನರ್ಜಿ ಗಂಭೀರ ಆರೋಪ!ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ವೀಲ್ ಚೇರ್ ಮೇಲೆ ಕುಳಿತು ಪ್ರಚಾರದ ಅಖಾಡಕ್ಕೆ ಧುಮುಕಿರುವ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ನನ್ನ ಭದ್ರತಾ ಸಿಬ್ಬಂದಿ ಮತ್ತು ಜೊತೆಯಲ್ಲಿರುತ್ತಿದ್ದ ನಿರ್ದೇಶಕರನ್ನ ತೆಗೆದುಹಾಕಿದೆ. ಬಹುಶಃ ಬಿಜೆಪಿ ನನ್ನ ಕೊಲೆಗೆ ಸಂಚು ರೂಪಿಸಿರಬಹುದು ಎಂದು ಆರೋಪಿಸಿದ್ದಾರೆ

ಚುನಾವಣೆ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಗೃಹ ಸಚಿವರು ದೇಶವನ್ನ ನಡೆಸುತ್ತಿದ್ದು, ಯಾರು ಸಾಯಬೇಕು ಅಥವಾ ಯಾರನ್ನ ಬಂಧಿಸಬೇಕು ಅನ್ನೋದನ್ನು ನಿರ್ಧರಿಸುತ್ತಿದ್ದಾರೆ. ಯಾರ ಹಿಂದೆ ಯಾವ ಏಜೆನ್ಸಿಯನ್ನ ಬಿಡಬೇಕು ತೀರ್ಮಾನಿಸುತ್ತಾರೆ. ಚುನಾವಣಾ ಆಯೋಗದ ಹಿಂದೆ ಯಾರಿದ್ದಾರೆ ಎಂಬುವುದು ಗೊತ್ತು ಎಂದು ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಚುನಾವಣಾ ಆಯೋಗ ನನ್ನ ಭದ್ರತಾ ಸಿಬ್ಬಂದಿ ಮತ್ತು ನಿರ್ದೇಶಕರನ್ನ ತೆಗೆದಿದೆ. ಬಿಜೆಪಿ ನನ್ನನ್ನ ಕೊಲ್ಲಲು ಸಂಚು ರೂಪಿಸುತ್ತಿರುವ ಅನುಮಾನಗಳು ಹುಟ್ಟಿಕೊಂಡಿದೆ. ಆದ್ರೆ ನಾವು ಯಾವುದಕ್ಕೂ ಭಯಪಡಲ್ಲ. ರಾಜ್ಯದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಚುನಾವಣೆ ನಡೆಯಲಿ. ಕೊರೊನಾ ಮತ್ತು ಅಂಫಾನ್ ವೇಳೆ ಕೇಂದ್ರ ನಮಗೆ ಸಹಾಯ ಮಾಡಲಿಲ್ಲ. ಹೊರಗಿನಿಂದ ಬಂದ ಗೂಂಡಾಗಳಿಗೆ ಚುನಾವಣೆ ನಡೆಸಲು ನಾವು ಬಿಡಲ್ಲ ಎಂದರು