ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ:



ಬೆಂಗಳೂರು: ಬಿಜೆಪಿಯ ಭಿನ್ನಮತೀಯ ಶಾಸಕನ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಂದ ಆಗ್ರಹಿಸಿದ್ದಾರೆ. ಬಿಜೆಪಿಯ ಭಿನ್ನಮತೀಯ ಶಾಸಕ ಅರವಿಂದ್ ಬೆಲ್ಲದ ಅವರು ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು. ಈ ಆರೋಪವನ್ನು ತಿಪ್ಪೆ ಸಾರಿಸುವ ಸ್ಪಷ್ಟಿಕರಣದ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡದೆ ಈ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆ ತರಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಫೋನ್ ಟ್ಯಾಪಿಂಗ್ ಆಗುತ್ತಿರುವುದನ್ನು ಬಹಿರಂಗಪಡಿಸುವ ಧೈರ್ಯ ತೋರಿದ ಶಾಸಕ ಅರವಿಂದ್ ಬೆಲ್ಲದ್ ಅವರನ್ನು ಅಭಿನಂದಿಸುತ್ತೇನೆ. ಇದು ಕೇವಲ ಬೆಲ್ಲದರೊಬ್ಬರ ಫೋನ್ ಗೆ ಸಂಬಂಧಿಸಿದ್ದಾಗಿರಲಿಕ್ಕಿಲ್ಲ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರೆಂದು ಗುರುತಿಸಿಕೊಂಡಿರುವ ಇತರ ಶಾಸಕರು ಮಾತ್ರವಲ್ಲ ವಿರೋಧಪಕ್ಷದ ನಾಯಕರ ಫೋನ್ ಗಳ ಕದ್ದಾಲಿಕೆಯೂ ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ.

ರಾಜ್ಯ ಬಿಜೆಪಿಯ ಭಿನ್ನಮತೀಯ ನಾಯಕರಿಂದ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹದ್ದೊಂದು ಆರೋಪ ವ್ಯಕ್ತವಾಗಿದೆ. ಅರವಿಂದ್ ಬೆಲ್ಲದ್ ಅವರು ಭಿನ್ನಮತೀಯರ ಜೊತೆ ಗುರುತಿಸಿಕೊಂಡಿರುವ ಪ್ರಮುಖ ಶಾಸಕರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಪದ ಗುರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಗಿರುತ್ತಾರೆ. ಬೆಲ್ಲದ್ ಅವರ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವ ಸಂಸ್ಥೆ ನಡೆಸಿದರೂ ಅದರಿಂದ ಸತ್ಯ ಸಂಗತಿ ಖಂಡಿತ ಹೊರಬರಲಾರದು. ಆದ್ದರಿಂದ ಈ ತನಿಖೆಯನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದಲೇ ನಡೆಸುವುದು ಸೂಕ್ತವಾಗಿದೆ. ಬೆಲ್ಲದ ಅವರು ತನ್ನ ಆರೋಪದಲ್ಲಿ ಈಗಾಗಲೇ ಜೈಲಲ್ಲಿರುವ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರ ಒಡನಾಡಿಯಾಗಿದ್ದ ಯುವರಾಜ ಸ್ವಾಮಿ ಎಂಬ ವ್ಯಕ್ತಿಯ ಹೆಸರೂ ಪ್ರಸ್ತಾಪವಾಗಿದೆ.