ಭಾರತದ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ನೇರ ಕಾರಣ: ಬಿಜೆಪಿ ನಾಯಕ ಟೀಕೆದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೂ ಎಲ್ಲ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡಿತೇ ವಿನಾ ಅವುಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದರು

ಬಳ್ಳಾರಿ ಬಿಜೆಪಿ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಈ-ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮೋದಿ ಸರಕಾರದ 7 ವರ್ಷಗಳ ಸಾಧನೆ ವಿಷಯದ ಬಗ್ಗೆ ವರ್ಚುವಲ್ ಮೂಲಕ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಮಸ್ಯೆಗಳನ್ನು ನಿರಂತರವಾಗಿ ಬದುಕಿರುವಂತೆ ನೋಡಿಕೊಳ್ಳುತ್ತಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಅಂಥ ಸಮಸ್ಯೆಗಳಿಗೆ ಚರಮಗೀತೆ ಹಾಡುತ್ತಾ ಬರುತ್ತಿದೆ ಎಂದರು.

ಕಾಶ್ಮೀರ, ರಾಮಮಂದಿರ, ವಲಸಿಗರ ದುಃಸ್ಥಿತಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ, ಮೂಲಸೌಕರ್ಯ, ತೆರಿಗೆ, ಕಪ್ಪುಹಣ ಇತ್ಯಾದಿ ಅಂಶಗಳ ಬಗ್ಗೆ ಕಾಂಗ್ರೆಸ್ ಅದೆಷ್ಟು ಉಪೇಕ್ಷೆ ಮಾಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇತಿಹಾಸವೇ ಎಲ್ಲ ಸತ್ಯಗಳನ್ನು ಬಿಚ್ಚಿಡುತ್ತಿದೆ. ಆದರೆ, ಬಿಜೆಪಿ ಸರಕಾರ ಈ ಎಲ್ಲ ಸಮಸ್ಯೆಗಳಿಂದ ದೇಶವನ್ನು ಹೊರ ತಂದಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.