ದಿವಂಗತ ಉದಾಸಿಯವರ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ನೋಡಲೇಬೇಕು?7 ನೇ ಕ್ಲಾಸು ಓದಿದ್ದ ಹುಡುಗ ಇಷ್ಟೊಂದು ಸಾಧನೆ ಮಾಡಲು ಹೇಗೆ ಸಾಧ್ಯ ಎಂಬುದೇ ಹಲವರ ಪ್ರಶ್ನೆಯಾಗಿತ್ತಂತೆ. ಹೌದು ಹಾನಗಲ್ಲಿನ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿಯವರಿಗೆ ಹಲವಾರು ಜನ ಈ ಪ್ರಶ್ನೆಯನ್ನೇ ಕೇಳುತ್ತಿದ್ದರಂತೆ. 7 ನೇ ತರಗತಿಗೆ ವಿದ್ಯೆಗೆ ನೈವೆದ್ಯೆ ಹಾಡಿ ಹಾನಗಲ್ಲಿನ ಕಿರಾಣಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರಂತೆ. ಅಲ್ಲಿಂದ ಶುರುವಾದ ಉದಾಸಿ ಮೇನಿಯಾ ಹಿಂತಿರುಗದೇ ಸಾಗಿತು.

ಅಕ್ಕಿ ವ್ಯಾಪಾರ ಶುರು ಮಾಡಿದ ಉದಾಸಿಯವರು ಊರು ಸುತ್ತಲು ಶುರು ಮಾಡಿದರಂತೆ. ಕೇವಲ ಅಕ್ಕಿ ವ್ಯಾಪಾರ ಮಾಡದೇ ಕನ್ನಡ, ತುಳು, ಉರ್ದು, ಇಂಗ್ಲಿಷ್, ಹಿಂದಿ, ತೆಲುಗು ಹೀಗೆ ನಿರರ್ಗಳವಾಗಿ ಮಾತನಾಡಲು ಹಲವಾರು ಭಾಷೆಗಳನ್ನ ಕಲಿತರಂತೆ. ಉದಾಸಿ ಅಕ್ಕಿ ಬ್ರಾಂಡ್ ನ್ನ ಜನಪ್ರಿಯಗೊಳಿಸಿ, ನಂತರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.

ಅಂದು ಉದಾಸಿಯವರ ಜನಪ್ರಿಯತೆಯ ಉದಾಹರಣೆ ಹೇಗಿತ್ತಂದರೇ, 1983 ರಲ್ಲಿ ಸಿ.ಎಂ.ಉದಾಸಿ ಹಾನಗಲ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ. ಮನೋಹರ ತಹಶೀಲ್ದಾರ್ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಈ ವೇಳೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಇಂದಿರಾ ಗಾಂಧಿ, ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡಿ ಅನ್ನುವ ಬದಲು , ಸಿ.ಎಂ.ಉದಾಸಿಯವರಿಗೆ ಮತ ನೀಡಿ ಗೆಲ್ಲಿಸಿ ಎಂದಿದ್ದರಂತೆ.

1983ರಿಂದ ಶುರುವಾದ ಉದಾಸಿಯವರ ರಾಜಕೀಯ ಜೀವನ ಹಲವಾರು ಏಳು-ಬೀಳುಗಳನ್ನ ಕಂಡಿದೆ. ಒಮ್ಮೆ ಗೆಲ್ಲಿಸಿದ ಅಭ್ಯರ್ಥಿಯನ್ನ ಮತ್ತೊಮ್ಮೆ ಗೆಲ್ಲಿಸದೇ ಪ್ರತಿ ಐದು ವರ್ಷಕ್ಕೊಮ್ಮೆ ಶಾಸಕರನ್ನ ಬದಲಾಯಿಸುವ ಸಂಪ್ರದಾಯವನ್ನ ಹಾನಗಲ್ ಮತದಾರರು ರೂಢಿಸಿಕೊಂಡಿದ್ದಾರೆ. 1996 ರಲ್ಲಿ ಜೆ.ಎಚ್ ಪಟೇಲರ ಸಂಪುಟದಲ್ಲಿ ಉದಾಸಿಯವರು ಲೋಕೋಪಯೋಗಿ ಸಚಿವರಾಗಿರುತ್ತಾರೆ. ಆದರೇ ನಂತರದ ಚುನಾವಣೆಗಳಲ್ಲಿ ಜನತಾ ಪಕ್ಷ ವಿಭಜನೆಯಾಗಿ, ಕರ್ನಾಟಕದಾದ್ಯಂತ ದಯನೀಯ ಪರಿಸ್ಥಿತಿಯಲ್ಲಿರುತ್ತದೆ.

2004 ರ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಹಲವಾರು ಜನ ಜನತಾ ಪರಿವಾರದ ನಾಯಕರು ಬಿಜೆಪಿ ಸೇರುತ್ತಾರೆ. ಅದರಲ್ಲಿ ಪ್ರಮುಖರೆಂದರೇ, ಉದಾಸಿಯವರು ಹಾಗೂ ಗೋವಿಂದ ಕಾರಜೋಳ. 2006 ರ ಬಿಜೆಪಿ-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸುತ್ತಾರೆ. 2008 ರಲ್ಲಿ ಮೊದಲ ಭಾರಿ ಹಾನಗಲ್ ವಿಧಾನಸಭಾ ಕ್ಷೇತ್ರ ಸತತವಾಗಿ ಏರಡನೇ ಅವಧಿಗೆ ಉದಾಸಿಯವರನ್ನ ಆಯ್ಕೆ ಮಾಡುತ್ತಾರೆ‌. 2008 ರಿಂದ 2013 ರ ತನಕ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ :  ಬಿಎಸ್ ವೈ ಮೇಲೆ ಮತ್ತೆ ಅಸಮಾಧಾನದ ಹೊಗೆ

2013ರಲ್ಲಿ ಯಡಿಯೂರಪ್ಪನವರಿಗೆ ಕೆಜೆಪಿ ಕಟ್ಟಿ ನಾವು ಬರುತ್ತೆವೆ ಎಂದು ಹೇಳಿದ ಕೆಲವು ಗಳಸ್ಯ-ಕಂಠಸ್ಯ ಸ್ನೇಹಿತರುಗಳೇ ಕೊನೆ ಕ್ಷಣದಲ್ಲಿ ಕೆಜೆಪಿಗೆ ಬರದೇ ಕೈ ಕೊಟ್ಟರೂ , ಉದಾಸಿಯವರು ಮಾತ್ರ ಯಡಿಯೂರಪ್ಪನವರ ಜೊತೆ ಉಳಿದು ಕೆಜೆಪಿಯಿಂದ ಸ್ಪರ್ಧಿಸಿ ಅಲ್ಪಮತಗಳಿಂದ ಸೋಲನುಭವಿಸುತ್ತಾರೆ.

ಅವರೇ ಹೇಳಿದ ಒಂದು ಸ್ವಾರಸ್ಯಕರ ಘಟನೆಯೆಂದರೇ, ಒಮ್ಮೆ ಕರ್ನಾಟಕ ಸರ್ಕಾರದ ಗಿರಣಿಗಳಿಂದ ಲೆವಿ ಅಕ್ಕಿ ಸಂಗ್ರಹಿಸುವ ಬಗ್ಗೆ ಒಂದು ಕಾನೂನು ತೊಡಕು ಉಂಟಾಗಿತ್ತಂತೆ. ಹಿರಿಯ ವಕೀಲರೆಲ್ಲರೂ ಸೇರಿ ಹೊಸ ಅಂಶಗಳನ್ನ ಸೇರಿಸಿ ತಮ್ಮ ಅಭಿಪ್ರಾಯ ಸಲ್ಲಿಸದರಂತೆ. ಆದರಂತೆ ಕೊನೆಯಲ್ಲಿ ಅವರೆಲ್ಲರೂ, “ನಾವೇನೋ ನಮಗೆ ತಿಳಿದಿದ್ದನ್ನ ಹೇಳಿದ್ದೇವೆ, ಯಾವದಕ್ಕೂ ಒಂದು ಭಾರಿ ಸಿ.ಎಂ.ಉದಾಸಿಯವರಿಗೆ ತೋರಿಸಿ ಅವರಿಂದ ಒಂದು ಒಪಿನಿಯನ್ ಪಡೆಯಿರಿ, ಅವರು ಕೊಡುವ ಅಭಿಪ್ರಾಯ ಸರಿ ಇರುತ್ತದೆ” ಅಂದಿದ್ದರಂತೆ.

ತೆರಿಗೆ ನೀತಿ, ಕಂದಾಯ, ನಗರಾಭಿವೃದ್ಧಿ, ನೀರಾವರಿ, ಹಣಕಾಸು ಹೀಗೆ ಎಲ್ಲಾ ವಿಷಯಗಳಲ್ಲಿಯೂ ಆಳವಾದ ಜ್ಞಾನದಿಂದ ವಿಭಿನ್ನ ಶೈಲಿಯ ಆಡಳಿತ ನಡೆಸಿದ ಮಹನೀಯರಲ್ಲಿ ಇವರು ಒಬ್ಬರು. ಒಮ್ಮೆ ಭೇಟಿಯಾಗಿದ್ದಾಗ ನಾನು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದರ ಬಗ್ಗೆ ಕೇಳಿದ್ದೆ. ಅದಕ್ಕವರು ಹೇಳಿದ್ದು ಒಂದೇ ಮಾತು.

ನಾನು ಅವತ್ತು ರಿಸ್ಕ್ ತೆಗೆದುಕೊಂಡಿದ್ದಕ್ಕೆ ಇಂದು ಶಾಸಕ, ಸಚಿವ ಉದಾಸಿ ಆಗಿದ್ದೆನೆ. ರಿಸ್ಕ್ ತೆಗೆದುಕೊಳ್ಳದೇ ಸುಮ್ಮನೆ ಇದ್ದಿದ್ದರೇ, ಹೆಚ್ಚೆಂದರೇ ಒಂದು ಕಿರಾಣಿ ಅಂಗಡಿಯ ಮಾಲೀಕನಾಗಿರುತ್ತದೆ ಅಷ್ಟೇ. ನೀವು ಈ ಸಾರಿ ಏಕೆ ಸಚಿವರಾಗಲಿಲ್ಲ ಎಂದು ಕೇಳಿದ್ದಕ್ಕೆ, ಹಾಗಲ್ಲಪ್ಪಾ, ಸಾರ್ವಜನಿಕ ಜೀವನದಲ್ಲಿ ಇರ್ತಿವಿ ಅಂದರೇ, ಕನಿಷ್ಠ ಪಕ್ಷ ಸಾರ್ವಜನಿಕರಿಗೆ 14 ತಾಸು ಆದರೂ ಸಮಯ ಕೊಡಬೇಕು, ಅಷ್ಟೊಂದು ಸಮಯ ಕೊಡಲು ನನಗೆ ಆರೋಗ್ಯ ಸಾಥ್ ಕೊಡುತ್ತಿಲ್ಲ, ಹಾಗಾಗಿ ನಾನು ಸಚಿವ ಸ್ಥಾನದ ರೇಸ್ ಗೆ ಹೋಗಲಿಲ್ಲ ಎಂದಿದ್ದರು.

ಜೀವನಪೂರ್ತಿ ಅಜಾತಶತ್ರುವಾಗಿ ಉಳಿದ ಅಣ್ಣಾವ್ರು ದೈಹಿಕವಾಗಿ ಅಗಲಿದ್ದಾರೆ. ಮತ್ತೊಮ್ಮೆ ಹಾನಗಲ್ಲಿನಲ್ಲಿಯೇ ಹುಟ್ಟಿ ಬನ್ನಿ.

📝ಕೃಪೆ:- Anil Gowder

ಓಂಶಾಂತಿ.