ಸ್ವಪಕ್ಷದ ವಿರುದ್ಧ ಕೆಂಡಕಾರಿದ ವಿಶ್ವನಾಥ್!
ಸರ್ಕಾರದಿಂದ ಅಕ್ಷರ,ಆರೋಗ್ಯ ಕೆಟ್ಟು ಹೋಗುತ್ತಿದೆ ವಿಶ್ವನಾಥ್ ವಾಗ್ದಾಳಿಮೈಸೂರು: ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಡೆಲ್ಟಾ ಅಲೆ ಮತ್ತು ಕೊರೊನಾ ಮೂರನೇ ಅಲೆ ಶುರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಯಾಕೆ ಬೇಕು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಇಲಾಖೆ ನಿರ್ಧಾರವನ್ನು ಖಂಡಿಸಿ ಮಾತನಾಡಿದ ಅವರು, ಸಾವಿನ ಕೂಪಕ್ಕೆ ಮಕ್ಕಳನ್ನು ತಳ್ಳುವ ಕೆಲಸ ಇದು. ಶಿಕ್ಷಣ ಇಲಾಖೆ ಮಾಜಿ ಸಚಿವರ ಜೊತೆ ಹಾಲಿ ಸಚಿವರು ಚರ್ಚೆ ಮಾಡಬೇಕಿತ್ತು. ಯಾರದ್ದೋ ಮಾತು ಕೇಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ ಎಂದು ಟೀಕಿಸಿದರು.

ಪರೀಕ್ಷೆ ಬರೆಯಲು ಬರುವ ಮಕ್ಕಳ ಆರೋಗ್ಯ ಜವಾಬ್ದಾರಿ ಯಾರದ್ದು? ಯಾಕೆ ಶಿಕ್ಷಣ ಸಚಿವರು ಈ ರೀತಿಯ ಈಗೋ ತೋರಿಸುತ್ತಿದ್ದಾರೆ. ಮಕ್ಕಳನ್ನು ಸಾಯಿಸಲು, ಶಿಕ್ಷಕರನ್ನು ಸಾಯಿಸಲು ಈ ಪರೀಕ್ಷೆ ಮಾಡುತ್ತೀದ್ದಿರಾ? ಮಕ್ಕಳನ್ನು ಸಾಯಿಸಿ ಅವರ ಪೋಷಕರ ಸಾಯಿಸಲು ಮುಂದಾಗಿದ್ದೀರಾ? ಪರೀಕ್ಷೆ ಮಾಡುವ ಹಠ ಶಿಕ್ಷಣ ಸಚಿವರಿಗೆ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡುವ ನಿರ್ಧಾರಕ್ಕೆ ಬಂದಿದ್ದೀರಾ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನನಗೆ ಎಲ್ಲಾ ಗೊತ್ತು ಎಂಬ ಈಗೋ ಮಂತ್ರಿಗೆ ಇರಬಾರದು. ಪಾಠವೇ ಇಲ್ಲದೇ ಪರೀಕ್ಷೆ? ಇದು ಮೂರ್ಖತನ ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕು ಎಂಬ ತೀರ್ಮಾನ ಹಿಂಪಡೆಯಿರಿ ಎಂದು ಆಗ್ರಹಿಸಿದರು.