ಹಾಲಿವುಡ್ ರೇಂಜ್ ನಲ್ಲಿ ಕಾರ್ ನಿಲ್ಲಿಸಿದ ಪೊಲೀಸರು! ಬೆಚ್ಚಿಬಿದ್ದ ಹಾಲಿವುಡ್ ನಟನೀವು ಹಾಲಿವುಡ್ ನ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಸರಣಿ ಸಿನಿಮಾಗಳನ್ನು ನೋಡೇ ಇರುತ್ತೀರಿ. ಅವುಗಳಲ್ಲಿ ಬರುವ ಸೂಪರ್ ಕಾರುಗಳ ವೇಗದ ಬಗ್ಗೆ ನೀವು ಅಚ್ಚರಿ ಪಟ್ಟಿರುತ್ತೀರಿ. ಆದರೆ, ಒಂದೇ ಸ್ಥಳದಲ್ಲಿ 45 ಸೂಪರ್ ಕಾರುಗಳನ್ನು ನಿಲ್ಲಿಸಿರುವುದನ್ನು ಎಲ್ಲಿಯಾದರೂ ನೋಡಿದ್ದೀರಾ..? ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಚಿತ್ರದಲ್ಲಿಯೂ ಈ ದೃಶ್ಯ ನಿಮಗೆ ಕಾಣ ಸಿಗುವುದಿಲ್ಲ. ಇತ್ತೀಚೆಗೆ ಹಾಂಗ್ ಕಾಂಗ್‌ನ ಜನರು ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದಾರೆ.

ಹೌದು, ಹಾಂಗ್ ಕಾಂಗ್‌ನಲ್ಲಿ ಬರೋಬ್ಬರಿ 45 ಸೂಪರ್ ಕಾರುಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಅವುಗಳನ್ನು ನೋಡಿದ ಆ ದೇಶದ ಜನರು ವಾವ್ಹ್..! ಎಂದು ಉದ್ಘಾರ ತೆಗೆದಿದ್ದರು. ಅಷ್ಟಕ್ಕೂ ಅಷ್ಟೊಂದು ಸೂಪರ್ ಕಾರುಗಳು ರಸ್ತೆಯಲ್ಲಿ ಏಕೆ ಸಾಲಾಗಿ ನಿಂತಿದ್ದವು ಅಂತೀರಾ? ರಸ್ತೆಯಲ್ಲಿ ಅಕ್ರಮವಾಗಿ ರೇಸ್ ನಡೆಸುತ್ತಾರೆಂದು ಶಂಕಿಸಿ ಮತ್ತು ವಾಹನಗಳಲ್ಲಿ ಅಕ್ರಮವಾಗಿ ಏನಾದರೂ ಮಾರ್ಪಾಡು ಮಾಡಲಾಗಿದೆಯೇ ಎಂದು ಪರಿಶೀಲಿಸಲು ಸ್ಥಳೀಯ ಪೊಲೀಸರು 4 ಡಜನ್ ಅಲ್ಟ್ರಾ ಪವರ್ ಸೂಪರ್ ಕಾರುಗಳನ್ನು ತಡೆದು ನಿಲ್ಲಿಸಿದ್ದರು. ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ನಿಂತಿದ್ದ ಸೂಪರ್ ಕಾರುಗಳನ್ನು ನೋಡಿದ ಅಲ್ಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು.