ಖಾತೆ ಬದಲಾವಣೆಗೆ ಪಟ್ಟು: ಎಂಟಿಬಿ ನಾಗರಾಜ್ಬೆಂಗಳೂರು: ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಡದಿದಕ್ಕೆ ಮುನಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಗೆ ನಿನ್ನೆ ಸಚಿವ ಆರ್.ಅಶೋಕ್ ಅವರ ಬಳಿ ಇದ್ದ ಉಸ್ತುವಾರಿಯನ್ನ ನೀಡಿದೆ. ಆದರೂ ಸಮಾಧಾನಗೊಳ್ಳದ ಎಂಟಿಬಿ ಈಗ ಉತ್ತಮ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗಿದ್ದ ಹೊಸಕೋಟೆ ಕ್ಷೇತ್ರಕ್ಕೆ ಐದು ಸಾವಿರ ಫುಡ್ ಕಿಟ್‍ಗಳನ್ನ ಇಂದು ಮೊದಲ ಬಾರಿಗೆ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ ಗಳಿಗೆ ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಆಹಾರ ಕಿಟ್ ಗಳನ್ನ ನೀಡುವ ಮೂಲಕ ಚಾಲನೆ ನೀಡಿದರು. ನಾಳೆಯಿಂದ ಕಟ್ಟಡ ಕಾರ್ಮಿಕರಿಗೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿತರಣೆ ಮಾಡುವುದಾಗಿ ಹೇಳಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಇದಕ್ಕೂ ಮೊದಲು ನನಗೆ ಸಿಎಂ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ನಾನು ಹೊಸಕೋಟೆಯಲ್ಲಿ ಮೂರು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಇದಕ್ಕೂ ಮೊದಲು ಬೆ.ಗ್ರಾ. ಉಸ್ತುವಾರಿ ಆಗಿ ಕೆಲಸ ಮಾಡಿರುವ ಅನುಭವ ಇದೆ. ನನಗೆ ಬೆ.ಗ್ರಾ. ಜಿಲ್ಲೆಯನ್ನೆ ನೀಡಿ ಇಲ್ಲಿನ ನಾಡಿಮಿಡಿತ ಮತ್ತು ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಅನುಭವ ಇದೆ. ಕೊಟ್ಟರೆ ಬೆಂಗಳೂರು ಗ್ರಾಮಾಂತರ ಕೊಡಿ ಇಲ್ಲದಿದ್ದರೆ ಯಾವುದು ಬೇಡ ಅಂತ ಹೇಳಿದ್ದೆ. ಆದ್ದರಿಂದ ಕೋಲಾರ ಜಿಲ್ಲೆ ವಾಪಸ್ ತೆಗೆದುಕೊಂಡು ನಿನ್ನೆ ಸಿಎಂ ಅವರು ಮತ್ತು ನಮ್ಮ ಎಲ್ಲಾ ನಾಯಕರು ಸೇರಿ ನನಗೆ ಉಸ್ತುವಾರಿ ವಹಿಸಿದ್ದಾರೆ ಎಂದರು.