ಬಾಂಬ್ ಸಿಡಿಸಿದ ಸಿದ್ದುಕೊಪ್ಪಳ: ರಾಜು ಬಿಜೆಪಿಲ್ಲಿ ಆಗುತ್ತಿರುವ ಭಾರೀ ಬೆಳವಣಿಗೆಗಳ ಮಧ್ಯೆಯೇ ಇತ್ತ ಕಾಂಗ್ರೆಸ್ಸಿನಲ್ಲಿ ಮುಂದಿನ ಸಿಎಂ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಏರ್ಪೋರ್ಟ್ ನಲ್ಲಿ ಮಾತನಾಡಿದ ಮಾಜಿ ಸಿಎಂ, ಮುಂದಿನ ಸಿಎ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತಿಲ್ಲ. ಒಂದಿಷ್ಟು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಒಂದು ಸಿಸ್ಟಮ್ ಇದೆ. ಚುನಾವಣೆ ಮುಗಿದ ಬಳಿಕ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೋ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ ತಕ್ಷಣ ಅದು ಪಕ್ಷದ ಅಭಿಪ್ರಾಯವಲ್ಲ. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ ಎಂದು ಹೇಳಿದರು. 

ಇದೇ ವೇಳೆ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ ಸಂಬಂಧ ಮಾತನಾಡಿ, ಈ ಪ್ರಕರಣದ ಕುರಿತು ತನಿಖೆಯಾಗಬೇಕು. ತನಿಖೆಗೆ ನಾನು ಒತ್ತಾಯ ಮಾಡಿದ್ದೇನೆ. ಇನ್ನೊಬ್ಬರ ಫೋನ್ ಕದ್ದಾಲಿಕೆ ಮಾಡುವ ಅಧಿಕಾರ ಸರ್ಕಾರಕ್ಕಾಗಲಿ, ಪೊಲೀಸರಿಗಾಗಲಿ ಇಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಸಮಯದಲ್ಲಿ ಏನಾಗಿದೆ ಗೊತ್ತಿದೆಯಲ್ಲ. ಇದು ಗಂಭೀರವಾದ ವಿಚಾರ. ಇದು ಯಾವುದೇ ಪಕ್ಷದವರಾಗಲಿ ಯಾರೇ ಆಗಲಿ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.