ಮಲ್ಯ ಆಸ್ತಿ ಮಾರಾಟಕ್ಕೆ ಬ್ಯಾಂಕುಗಳಿಗೆ ಅನುಮತಿಮುಂಬೈ : ಬ್ಯಾಂಕುಗಳಿಗೆ 9000 ಕೋಟಿ ರೂ. ವಂಚಿಸಿ ದೇಶದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ 5646 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಲು ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಬೆಂಗಳೂರಿನ ಯುಬಿ ಟವರ್ ಕಟ್ಟಡದ ಹಲವು ಅಂತಸ್ತುಗಳು ಸೇರಿದಂತೆ ದೇಶದ ವಿವಿದೆಡೆಯ ಜಪ್ತಿ ಮಾಡಿಕೊಂಡಿರುವ ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ.ಹತ್ತು ದಿನಗಳ ಹಿಂದೆ 4234 ಕೋಟಿ ರೂ. ಆಸ್ತಿ ಬಿಡುಗಡೆಗೆ ಆದೇಶ ನೀಡಿದ್ದ ವಿಶೇಷ ನ್ಯಾಯಾಲಯ, ಮಂಗಳವಾರ 1411 ಕೋಟಿ ರೂ. ಮೌಲ್ಯದ ಆಸ್ತಿ ಬಿಡುಗಡೆಗೆ ತೀರ್ಪಿತ್ತಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಸಲುವಾಗಿ ವಿಜಯ್ ಮಲ್ಯ ಭಾರಿ ಮೊತ್ತದ ಹಣ ಪಡೆದಿದ್ದು, ಅದರನಷ್ಟದೊಡನೆ ದೇಶ ಬಿಟ್ಟು ಪರಾರಿಯಾಗಿದ್ದಾನೆ.

ಒಟ್ಟು ಹನ್ನೊಂದು ಬ್ಯಾಂಕುಗಳು ಮಲ್ಯಗೆ ಸಾಲ ನೀಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಸಾಲ ನೀಡಿದ ಬ್ಯಾಂಕುಗಳು ಮುಂಬೈ ನ್ಯಾಯಾಲಯಕ್ಕೆ ಮೊರೆ ಹೋಗಿ, ಜಪ್ತು ಮಾಡಿಕೊಂಡಿರುವ ಆಸ್ತಿಯ ಮಾರಾಟಕ್ಕೆ ಅನುಮತಿ ಕೋರಿದ್ದವು. ಬ್ಯಾಂಕುಗಳ ಪರವಾಗಿ ತೀರ್ಪು ಹೊರಬಿದ್ದಿದೆ ಎಂದು ಎಸ್‌ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಪ್ತು ಆಸ್ತಿಯನ್ನು ತೆಗೆದುಕೊಳ್ಳಲು ಬ್ಯಾಂಕುಗಳು ಸೂಕ್ತ ಕಾನೂನು ಪ್ರಕ್ರಿಯೆಗೆ ಮುಂದಾಗಿವೆ. ಸೆಕ್ಯುರಿಟೈಸೇಷನ್ ಆಂಡ್ ರಿಕನ್‌ಸ್ಟ್ರಕ್ಷನ್‌ ಆಫ್‌ ಫೈನಾನ್ಶಿಯಲ್ ಅಸೆಟ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಸೆಕ್ಯುರಿಟಿ ಇಂಟರೆಸ್ಟ್ ಆಕ್ಟ್ (ಎಸ್‌ಎಆರ್‌ಎಫ್‌ಎಇಎಸ್‌ಐ) ಅಡಿಯಲ್ಲಿ ಆಸ್ತಿ ಮಾರಿ ಸಾಲ ವಸೂಲಾತಿಗೆ ಬ್ಯಾಂಕುಗಳಿಗೆ ಅನುಮತಿ ದೊರೆತಂತಾಗಿದೆ.

ಇದನ್ನೂ ಓದಿ :  ರಾಮ್ ಪ್ರಸಾದ ಅವರ ಈ ಘಟನೆ ಮೈ ಜುಮ್ಮ ಎನಿಸುತ್ತದೆ. ನೋಡಿ

ಮಲ್ಯಗೆ ಅತಿ ಹೆಚ್ಚು ಸಾಲ ಕೊಟ್ಟಿರುವ ಬ್ಯಾಂಕ್ ಎಸ್‌ಬಿಐ 1600 ಕೋಟಿ ರೂ ಸಾಲ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 800 ಕೋಟಿ ರೂ, ಐಡಿಬಿಐ ಬ್ಯಾಂಕ್ 800 ಕೋಟಿ ರೂ. ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾ 650 ಕೋಟಿ ರೂ, ಸೆಂಟ್ರಲ್‌ಬ್ಯಾಂಕ್‌ ಆಫ್‌ ಇಂಡಿಯಾ 410 ಕೋಟಿ ರೂ. ಸಾಲನೀಡಿ ಕೈಸುಟ್ಟುಕೊಂಡಿವೆ . ಪ್ರಸ್ತುತ ಮಲ್ಯ ಲಂಡನ್‌ನಲ್ಲಿ ಜಾಮೀನಿನ ಮೇಲಿದ್ದಾರೆ.