ವನ್ಯಜೀವಿ ಮಂಡಳಿ ಸದಸ್ಯ ಜೋಸೆಫ್ ಹೂವರ್ ಹೇಳಿದ ಪರಿಸರದ ಗುಟ್ಟೇನು.?ಜೂನ್5 ರಂದು ವಿಶ್ವ ಪರಿಸರ ದಿನ ಅತಿ ಮುಖ್ಯವೆಂದು ಆಚರಿಸುತ್ತೇವೆ. ಆದರೆ ನನ್ನ ಪ್ರಕಾರ ವಿಶ್ವ ಪರಿಸರ ದಿನ ವರ್ಷದ 365 ದಿನವೂ ನಡೆಯಬೇಕು. ಕೇವಲ ಒಂದು ದಿನ ಶೋಕಿಗಾಗಿ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಲೈಕ್ ಗಿಟ್ಟಿಸಿಕೊಳ್ಳಲು ದಿನಾಚರಣೆಯಾಗಬಾರದು. ಯಾವುದೇ ಪ್ರಯೋಜನವಿಲ್ಲ.
ನನ್ನ ಪ್ರಕಾರ ಜೂನ್ 5 ರಂದೇ ಸಸಿಗಳನ್ನು ನೆಡಬೇಕು ಎನ್ನುವ ನಿಯಮವಿಲ್ಲ. ದಿನವೂ ಸಸಿಗಳನ್ನು ನೆಟ್ಟು ಉಳಿಸಿ, ಬೆಳೆಸಬೇಕಾಗಿದೆ. ಈ ಮನಸ್ಥಿತಿ ಬದಲಾಗಬೇಕಿದೆ. ಜನರ ಈ ರೀತಿಯ ಮನಸ್ಥಿತಿಯನ್ನು ಹಲವು ದಿನಗಳಿಂದ ನೋಡುತ್ತಿದ್ದೇವೆ. ಪರಿಸರವನ್ನು ನಿಜವಾಗಿಯೂ ಸಂರಕ್ಷಿಸಬೇಕಾದರೆ ಬದಲಾಗಬೇಕು. ಇತ್ತೀಚಿನ ದಿನದಲ್ಲಿ ವಾತಾವರಣದಲ್ಲಾಗುತ್ತಿರುವ ಬದಲಾವಣೆಯನ್ನು ನೋಡಿದರೆ ಒಂದು ದಿನ ಪರಿಸರವನ್ನು ಉಳಿಸುವುದರಿಂದ ಏನೂ ಪ್ರಯೋಜನವಿಲ್ಲ. ಪರಿಸರ ಸಂರಕ್ಷಣೆಯನ್ನು ಸರಕಾರ ಮಾಡಬೇಕು ಎಂದು ಜನರು ಯೋಚಿಸುತ್ತಾರೆ. ಆದರೆ ಸರಕಾರದೊಂದಿಗೆ ಜನರು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಮುಂದೆ ಬರಬೇಕಿದೆ.

ಒಂದು ದಿನ ಗಿಡನೆಟ್ಟು ನಮ್ಮ ಕಾಳಜಿ ಮುಗಿಯಿತು ಎನ್ನುವುದು ಸರಿಯಲ್ಲ. ಪರಿಸರವನ್ನು ಉಳಿಸಿ ಎಂದು ಸರಕಾರವನ್ನು ಆಗ್ರಹಿಸುವ ಕೆಲಸ ಆಗಬೇಕಿದೆ. ಹೊಸ ಸಸಿ ನೆಟ್ಟು ಫೋಟೋ ತೆಗೆಸಿಕೊಳ್ಳುವ ಬದಲು, ಈಗಾಗಲೇ ಇರುವ ಮರಗಳನ್ನು ಉಳಿಸುವ ಕೆಲಸಕ್ಕೆ ಕೈಹಾಕಬೇಕಿದೆ. ರಾಜ್ಯದ ಕಾಡಿನಲ್ಲಿರುವ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕಾಡಿನಲ್ಲಿರುವ ಮರಗಳನ್ನು ಉಳಿಸದಿದ್ದರೆ ಬೆಂಗಳೂರಿಗೆ ನೀರು ಬರುವುದಿಲ್ಲ. ಪರಿಸರ ಎಂದರೆ ಸಸಿ ನೆಡುವುದಷ್ಟೇ ಅಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ರೈಲು ಯೋಜನೆ, ರಸ್ತೆ ಅಗಲೀಕರಣ, ವಿದ್ಯುತ್ ಸ್ಥಾವರದ ಸ್ಥಾಪನೆ ಎನ್ನುವ ನೆಪದಲ್ಲಿ ಸಾವಿರಾರು ಮರಗಳನ್ನು ಕಡಿಯುವ ಕಾರ್ಯಕ್ಕೆ ಸರಕಾರ ಮುಂದಾಗುತ್ತಿದೆ. ಮೊದಲು ಇದನ್ನು ನಿಲ್ಲಿಸಬೇಕು. ಬೆಂಗಳೂರಿನಲ್ಲಿ ರಿಂಗ್ ರೋಡ್ ನಿರ್ಮಾಣವನ್ನು ಹೇಗೆ ಸುತ್ತಿಬಳಸಿ ಮಾಡಲಾಗಿದೆಯೋ ಅದೇ ರೀತಿ ಕಾಡಿನ ಭಾಗದಲ್ಲಿರುವ ರಸ್ತೆಗಳನ್ನು

ಇದನ್ನೂ ಓದಿ :  ರಾಜಕಾರಣದ ಗೊಂದಲಕ್ಕೆ ಈ ಇಬ್ಬರ ನಾಯಕರ ಡಬಲ್ ಗೇಮ್ ನೇರ ಕಾರಣ: ಕುಟುಕಿದ ಈಶ್ವರಪ್ಪ

ದೂರವಾದರೂ ಸುತ್ತಾಡಿಸಿಕೊಂಡು ಮಾಡಬೇಕು. ಅದು ಬಿಟ್ಟು ಕಾಡಿನ ಮಧ್ಯೆಯೇ ರಸ್ತೆ ಮಾಡುವ ಅವಶ್ಯಕತೆ ಏನಿದೆ? ಈಗಾಗಲೇ ವಾತಾವರಣ ಬದಲಾವಣೆಯಿಂದ ಭೂಮಿಯ ಎರಡು ಆರ್ಕ್‌ಟಿಕ್ಸ್ ಕರಗುತ್ತಿದೆ. ಇದರಿಂದ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದೇ ರೀತಿ ಮುಂದುವರಿಯುತ್ತಾ ಹೋದರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇತ್ತೀಚಿಗೆ ದಿನಕ್ಕೊಂದು ದಿನ ಬರುತ್ತಿದೆ. ಆನೆ ದಿನ, ಹುಲಿ ದಿನ, ಚಿರತೆ ದಿನ ಬರುತ್ತಿದೆ. ಇದು ನಿಜಕ್ಕೂ ಅಗತ್ಯವಿದೆಯೇ? ಆ ಒಂದು ದಿನವೇ ನಾವು ಆಚರಿಸಬೇಕಾ? ಅದರ ಬದಲು ಇರುವ ಕಾಡನ್ನು ಉಳಿಸುವಂತೆ ಆಗ್ರಹಿಸಬೇಕಿದೆ. ಸರಕಾರ ಶೇ.21 ರಷ್ಟು ಕಾಡಿದೆ ಎಂದು ಹೇಳುತ್ತಿದೆ. ಆದರೆ ನಿಜವಾಗಿ ನೋಡಿದರೆ ಶೇ.18 ರಷ್ಟು ಇರಬಹುದು. ಅದರಲ್ಲಿ ಶೇ.3.02 ರಷ್ಟು ಮಾತ್ರ ದಟ್ಟ ಕಾಡಿರುವುದು. ಆದ್ದರಿಂದ ಇರುವುದನ್ನಾದರೂ ಉಳಿಸಿ ಎನ್ನುವುದು ಸರಕಾರಕ್ಕೆ ನನ್ನ ಮನವಿ.