ಗಣೇಶ ವಿಸರ್ಜನೆ ವೇಳೆ ನಡೆಯಿತು ಪವಾಡ, ನಿಬ್ಬೆರಗಾದ ಜನ, ವೀಡಿಯೋ ವೈರಲ್!ಗಣೇಶ ಚತುರ್ಥಿ ಮುಗಿದರೂ ಎಲ್ಲೆಡೆ ಹಬ್ಬದ ಸಡಗರ ಇನ್ನೂ ಹಾಗೇ ಇದೆ. ಕರೊನಾ ಆತಂಕದ ನಡುವೆಯೂ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಮನೆಯೊಂದರಲ್ಲಿ ಇಟ್ಟಿದ್ದ ಗಣೇಶನನ್ನು ವಿಸರ್ಜನೆ ಮಾಡಿ ವಾಪಸ್ ಬಂದ ಬಳಿಕ ಆ ಮನೆಯಲ್ಲಿ ಪವಾಡವೊಂದು ನಡೆದಿದೆ ಎಂಬ ಸುದ್ದಿ ಹರಡಿದ್ದು, ಭಕ್ತರು ಇದು ವಿನಾಯಕನ ಪವಾಡ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

ಕುಸುಗಲ್ಲ್ ಗ್ರಾಮದ ಶಂಕರಗೌಡ ಪಾಟೀಲ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ವಿಸರ್ಜನೆ ನಂತರ ಪವಾಡ ನಡೆದಿದೆ ಎನ್ನಲಾಗುತ್ತಿದ್ದು. ಅದಕ್ಕೆ ಸಾಕ್ಷೀಕರಿಸುವ ವಿಡಿಯೋ ಕೂಡ ಹರಿದಾಡುತ್ತಿದೆ. ಆ ಮನೆಯಲ್ಲಿ ಮಹಿಳೆಯರಿಗೆ ಉಡಿ ತುಂಬುತ್ತಿರುವ ಸಮಯದಲ್ಲಿ ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ತನ್ನಷ್ಟಕ್ಕೆ ತಾನೇ ಅಲುಗಾಡಿದೆ. ಅಲ್ಲದೆ ಸ್ವಲ್ಪ ಮೇಲಕ್ಕೂ ಬಂದು ಮತ್ತೆ ಆ ಜಾಗದಲ್ಲೇ ಇದೆ!

ಮನೆಯಿಂದ ಗಣೇಶನನ್ನು ಹೊರ ಒಯ್ಯುತ್ತಿದ್ದಂತೆ ನಡೆದ ಪವಾಡಕ್ಕೆ ಹುಬ್ಬಳ್ಳಿ ಜನತೆ ಬೆರಗಾಗಿದ್ದಾರೆ. ಇದು ಗಣೇಶನ ಮಹಿಮೆ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ಅಲುಗಾಡಿ, ತನ್ನಷ್ಟಕ್ಕೆ ತಾನೇ ಮೇಲೆ ಎದ್ದ ಚಿತ್ರಣವನ್ನು ಅಲ್ಲೇ ಇದ್ದ ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ವೈರಲ್ ಆಗಿದೆ.

ಗಾಳಿಗೆ ವೀಳ್ಯದೆಲೆ ಅಲುಗಾಡಿರಬೇಕು ಎಂಬ ಮಾತು ಕೇಳಿಬಂದರೂ ಆ ಎಲೆ ಮೇಲೆ ಕೊಬ್ಬರಿ ಮತ್ತು ಹೂವನ್ನೂ ಇಡಲಾಗಿತ್ತು. ಆದರೂ ಆ ಎಲೆ ಅಲುಗಾಡಿದೆ. ಇದರ ಪಕ್ಕದಲ್ಲೇ ಇದ್ದ ಬೇರೆ ವೀಳ್ಯದೆಲೆ ಒಂಚೂರು ಕದಲಿಲ್ಲ. ಇದು ಗಣೇಶನ ಪವಾಡವೇ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಕೃಪೆ : ವಿಜಯವಾಣಿ ಧೈನಿಕ